ಕೋಲ್ಕತ್ತಾ: ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಖರಗ್‌ಪುರದಲ್ಲಿ ಚುನಾವಣಾ ಸಮಾವೇಶ ನಡೆಸಿದ್ದು, ರಾಜ್ಯ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರ ಬಾಂಗ್ಲಾದೇಶ ಭೇಟಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಇಲ್ಲಿ ಚುನಾವಣೆಗಳು ನಡೆಯುತ್ತಿವೆ. ಅವರು (ಪ್ರಧಾನಿ) ಬಾಂಗ್ಲಾದೇಶಕ್ಕೆ ಹೋಗಿ ಬಂಗಾಳ ಕುರಿತು ಉಪನ್ಯಾಸ ನೀಡುತ್ತಾರೆ. ಇದು ಚುನಾವಣಾ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಸೆಪ್ಟೆಂಬರ್ ಒಳಗೆ ರೂಪಾಂತರ ವೈರಸ್ ಮಣಿಸುವ ಮತ್ತೊಂದು ದೇಶಿ ಲಸಿಕೆ ಲಭ್ಯ: ಸೀರಮ್ ಸಂಸ್ಥೆ
2019ರ ಲೋಕಸಭಾ ಚುನಾವಣೆಯಲ್ಲಿ ಬಾಂಗ್ಲಾದೇಶದ ನಟರೊಬ್ಬರು ನಮ್ಮ ಸಮಾವೇಶದಲ್ಲಿ ಪಾಲ್ಗೊಂಡಾಗ, ಬಿಜೆಪಿ ಬಾಂಗ್ಲಾದೇಶ ಸರ್ಕಾರದೊಂದಿಗೆ ಮಾತನಾಡಿ, ಆತನ ವೀಸಾ ರದ್ದುಗೊಳಿಸಿತು. ಇಲ್ಲಿ ಮತದಾನ ನಡೆಯುತ್ತಿರುವಾಗ, ನೀವು (ಪಿಎಂ) ಬಾಂಗ್ಲಾದೇಶಕ್ಕೆ ಹೋಗಿ ಒಂದು ಭಾಗದ ಜನರ ಮತ ಪಡೆಯಲು, ಏಕೆ ನಿಮ್ಮ ವೀಸಾವನ್ನು ರದ್ದುಗೊಳಿಸಬಾರದೇ? ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಬ್ಯಾನರ್ಜಿ ಹೇಳಿದರು.
ಕೆಲವೊಮ್ಮೆ ಅವರು ಹೇಳುತ್ತಾರೆ ಮಮತಾ ಬಾಂಗ್ಲಾದೇಶದಿಂದ ಜನರನ್ನು ಕರೆತಂದಿದ್ದಾರೆ. ಅಕ್ರಮವಾಗಿ ಒಳನುಸುಳುವಿಕೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಆದರೆ ಅವರು (ಪ್ರಧಾನಿ) ಸ್ವತಃ ಮತದಾನಕ್ಕಾಗಿ ಬಾಂಗ್ಲಾದೇಶಕ್ಕೆ ಹೋಗುತ್ತಾರೆ ಎಂದರು.