ಚೆನ್ನೈ( ತಮಿಳುನಾಡು): ಸಿಎಂ ಸ್ಟಾಲಿನ್ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಸರಣಿ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಸರ್ಕಾರದ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಇಂದು ನಗರ ಸಾರಿಗೆ ಬಸ್( ಎಂಟಿಎಸ್) ಪ್ರಯಾಣಿಸುವ ಮೂಲಕ ಪ್ರಯಾಣಿಕರ ಕಷ್ಟ ಕಾರ್ಪಣ್ಯವನ್ನು ಅರಿಯುವ ಪ್ರಯತ್ನ ಮಾಡಿದರು.
ಮಹಿಳಾ ಪ್ರಯಾಣಿಕರೊಂದಿಗೆ ಸಮಾಲೋಚನೆ: ರಾಧಾಕೃಷ್ಣನ್ ಸಲೈನಲ್ಲಿ ಬಸ್ ಸಂಖ್ಯೆ 29 ಸಿ ಯಲ್ಲಿ ಅವರು ಪ್ರಯಾಣ ಮಾಡಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಮಹಿಳಾ ಪ್ರಯಾಣಿಕರೊಂದಿಗೆ ಮಾತನಾಡಿದರು. ಅವರಿಗೆ ಉಚಿತ ಪ್ರಯಾಣ ಸೌಲಭ್ಯದ ಬಗ್ಗೆ ವಿಚಾರಿಸಿದರು. ಮೊದಲ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅವರು ವಿಧಾನಸಭೆಯಲ್ಲಿಂದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ನೀಡುವ ಯೋಜನೆ ಘೋಷಣೆ ಮಾಡಿದರು. ಅದಷ್ಟೇ ಅಲ್ಲ ಇನ್ನೂ ಹಲವು ಕಾರ್ಯಕ್ರಮಗಳನ್ನು ಇದೇ ವೇಳೆ ಘೋಷಣೆ ಮಾಡಿದರು.
ಕರುಣಾನಿಧಿ ಸ್ಮಾರಕಕ್ಕೆ ಪುಷ್ಪನಮನ: ಚುನಾವಣೆ ಪೂರ್ವದಲ್ಲೇ ಡಿಎಂಕೆ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸಾರಿಗೆ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಯನ್ನು ಸ್ಟಾಲಿನ್ ನೀಡಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ಅವರು ಈ ಭರವಸೆಯನ್ನು ಈಡೇರಿಸಿದ್ದರು. ಇದೇ ವೇಳೆ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮರೀನಾ ಬೀಚ್ನಲ್ಲಿರುವ ದಿವಂಗತ ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದೊರೈ ಮತ್ತು ಅವರ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಉಚಿತ ಉಪಹಾರದ ಘೋಷಣೆ: 1- 5 ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಎಲ್ಲ ದಿನ ಪೌಷ್ಟಿಕ ಉಪಹಾರವನ್ನು ಒದಗಿಸುವ ಘೋಷಣೆಯನ್ನು ಸಿಎಂ ಸ್ಟಾಲಿನ್ ಮಾಡಿದ್ದಾರೆ. ಇದೇ ವೇಳೆ ಅವರು ಕಳೆದ ಒಂದು ವರ್ಷದಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಪಟ್ಟಿ ಮಾಡಿ ಜನರ ಮುಂದಿಟ್ಟಿದ್ದಾರೆ. ಜನಪರ ಹಾಗೂ ಅಭಿವೃದ್ಧಿ ಪರ ಆಡಳಿತ ಮುಂದುವರೆಸುವುದಾಗಿ ಇದೇ ವೇಳೆ ಅವರು ಘೋಷಣೆ ಮಾಡಿದ್ದಾರೆ.
ಜನರ ವೈದ್ಯಕೀಯ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಗರ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸುವುದಾಗಿಯೂ ಸ್ಟಾಲಿನ್ ಇದೇ ವೇಳೆ ಆಶ್ವಾಸನೆ ನೀಡಿದ್ದಾರೆ.
ಇದನ್ನ ಓದಿ: ನಡುರಸ್ತೆಯಲ್ಲೇ ಯುವತಿ ಜೀವಂತ ಸುಟ್ಟ ದುಷ್ಕರ್ಮಿಗಳು.. ಸಹಾಯಕ್ಕಾಗಿ ಅಂಗಲಾಚಿದ್ರೂ ಬಾರದ ಜನ!