ಶ್ರೀ ಗಂಗಾ ನಗರ (ರಾಜಸ್ಥಾನ): ಜಿಲ್ಲೆಯ ರಾಮಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ. ಐವರು ಮಕ್ಕಳು ಗದ್ದೆಯಲ್ಲಿ ನಿರ್ಮಾಣ ಮಾಡಿದ್ದ ನೀರಿನ ಹೊಂಡದಲ್ಲಿ ಸ್ನಾನ ಮಾಡಲು ಇಳಿದು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಮೂವರು ಗಂಡು ಮಕ್ಕಳು ಸೇರಿದ್ದಾರೆ. ಇವರು ಗ್ರಾಮದ ಕೂಲಿ ಕಾರ್ಮಿಕ ಕುಟುಂಬದವರು ಎನ್ನಲಾಗ್ತಿದೆ.
ಹೊಂಡ ಆಳವಾಗಿದ್ದರಿಂದ ಐದು ಮಕ್ಕಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ನಿಶಾ (13 ), ಭಾವನಾ(10), ಅಂಕಿತ್ (10), ಅಂಶು (9) ಮತ್ತು ರಾಧೆ (11) ಎಂದು ಹೇಳಲಾಗಿದೆ.
ಕೂಲಿ ಕಾರ್ಮಿಕ ಕುಟುಂಬದ ಈ ಮಕ್ಕಳಿಗೆಲ್ಲಾ ಶಾಲೆಗೆ ರಜೆ ಇದ್ದ ಕಾರಣ ಗ್ರಾಮದ ಸಮೀಪದ ಹೊಲಕ್ಕೆ ಹೋಗಿದ್ದರು. ಅಲ್ಲಿ ಹೊಂಡ ನೋಡಿ ಸ್ನಾನ ಮಾಡಲು ಇಳಿದಿದ್ದಾರೆ. ಆದರೆ, ಆಳ ಹೆಚ್ಚಿದ್ದರಿಂದ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ರಾಮಸಿಂಗ್‌ಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಐವರು ಮಕ್ಕಳ ಮೃತದೇಹಗಳನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ರಾಮಸಿಂಗ್‌ಪುರ ಉಪ ಆರೋಗ್ಯ ಕೇಂದ್ರದ ಶವಾಗಾರದಲ್ಲಿರಿಸಲಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್ನ ಕಾಂಗ್ರೆಸ್ ಶಾಸಕರ ಬಿಡುಗಡೆ