ನವದೆಹಲಿ: ತೀವ್ರ ಹಣಕಾಸಿನ ಬಿಕ್ಕಟ್ಟಿನಿಂದ ಸಂಕಷ್ಟಕ್ಕೊಳಗಾಗಿರುವ ನೆರೆಯ ರಾಷ್ಟ್ರ ಶ್ರೀಲಂಕಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7,596 ಕೋಟಿ ರೂಪಾಯಿ (1 ಬಿಲಿಯನ್ USD) ಸಾಲ ನೀಡಲು ಮುಂದಾಗಿದೆ. ಇದರಿಂದ ಅಗತ್ಯ ಆಹಾರ, ಔಷಧ ಸೇರಿದಂತೆ ಇತರೆ ಅಗತ್ಯ ವಸ್ತು ಖರೀದಿಗೆ ಬಳಕೆ ಮಾಡಿಕೊಳ್ಳಲಿದೆ.
ಸಾಲ ಒಪ್ಪಂದಕ್ಕಾಗಿ ಎರಡು ದೇಶಗಳು ಇಂದು ಸಹಿ ಹಾಕಿವೆ. ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಎರಡು ದಿನಗಳ ಭಾರತದ ಪ್ರವಾಸದಲ್ಲಿದ್ದು, ಈ ವೇಳೆ ಅವರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಎಸ್ಬಿಐನ ಪ್ರಮುಖ ಅಧಿಕಾರಿಗಳು ಸಭೆ ನಡೆಸಿದರು. ಇದರ ಬೆನ್ನಲ್ಲೇ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಇದನ್ನೂ ಓದಿ: ಉಕ್ರೇನ್ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನ ರಾಜಪಕ್ಸೆ ಭೇಟಿ ಮಾಡಿದ್ದು, ಈ ವೇಳೆ ಶ್ರೀಲಂಕಾಗೆ ಭಾರತ ಈ ಹಿಂದಿನಿಂದಲೂ ಆರ್ಥಿಕ ನೆರವು ನೀಡಿರುವುದಕ್ಕೆ ಧನ್ಯವಾದ ತಿಳಿಸಿದ್ದರು. ಈ ಹಿಂದೆ ಕೂಡ ಭಾರತ ಸಿಂಹಳೀಯರಿಗೆ 3,797 ಕೋಟಿ ರೂ. ಸಾಲ ನೀಡಿತ್ತು.