ನವದೆಹಲಿ: ದೆಹಲಿಯ ರಾಜ್‌ಪಥ್‌ನಲ್ಲಿ ದೇಶದ ಮಿಲಿಟರಿ ಶಕ್ತಿ ಪ್ರದರ್ಶನ ಎಲ್ಲರ ಮೈಜುಮ್ಮೆನ್ನಿಸಿತು. 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಭಾರತೀಯ ಯುದ್ಧ ವಿಮಾನಗಳು 75 ರ ಆಕೃತಿಯಲ್ಲಿ ವೈಮಾನಿಕ ಪ್ರದರ್ಶನ ನಡೆಸಿದ್ದು ರೋಮಾಂಚನಕಾರಿಯಾಗಿತ್ತು.
ಭಾರತೀಯ ವಾಯುಪಡೆಯ 75 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ನಡೆಸಿದ 'ಅದ್ಭುತ ಫ್ಲೈಪಾಸ್ಟ್' ರಾಜ್‌ಪಥ್‌ನಲ್ಲಿ ಸಂಚಲನ ಸೃಷ್ಟಿಸಿದವು.
ವಿಂಟೇಜ್ ಮತ್ತು ಆಧುನಿಕ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಾದ ರಫೇಲ್, ಸುಖೋಯ್, ಜಾಗ್ವಾರ್, Mi-17, ಸಾರಂಗ್, ಅಪಾಚೆ ಮತ್ತು ಡಕೋಟಾ ರಾಹತ್ ಯುದ್ಧ ವಿಮಾನಗಳು ಮೇಘನಾ, ಏಕಲವ್ಯ, ತ್ರಿಶೂಲ್, ತಿರಂಗ, ವಿಜಯ್ ಮತ್ತು ಅಮೃತ್ ಸೇರಿದಂತೆ ವಿವಿಧ ಮಾದರಿಯಲ್ಲಿ ಹಾರಾಟ ನಡೆಸಿ ಅದ್ಭುತ ಪ್ರದರ್ಶನ ನೀಡಿದವು.
ಐದು ರಫೇಲ್ ಯುದ್ಧ ವಿಮಾನಗಳು 'ವಿನಾಶ್' ರಚನೆ ಮಾಡಿದರೆ, ಒಂದು ರಫೇಲ್, ಎರಡು ಜಾಗ್ವಾರ್ಗಳು, ಎರಡು ಮಿಗ್-29 ಮತ್ತು ಎರಡು ಸು-30ಎಂಕೆಐ ಯುದ್ಧ ವಿಮಾನಗಳು 'ಬಾಜ್' ಮಾದರಿ ರಚನೆ ಮಾಡಿದವು.
ನೌಕಾಪಡೆಯ p-8ಐ ಮತ್ತು ಮಿಗ್ 29ಕೆ ಗಳು 'ವರುಣ್' ಆಕೃತಿಯಲ್ಲಿ ಫ್ಲೈಪಾಸ್ಟ್ ನಡೆಸಿದವು. ಮೂರು Su-30 MKI ವಿಮಾನಗಳು 'ತ್ರಿಶೂಲ್' ರಚನೆಯಲ್ಲಿ ಹಾರಾಟ ನಡೆಸಿದರೆ, 17 ಜಾಗ್ವಾರ್ ವಿಮಾನಗಳು 75 ರ ಆಕೃತಿಯಲ್ಲಿ ಹಾರಾಟ ನಡೆಸಿ ನೆರೆದವರ ಕಣ್ಮನ ಸೆಳೆದವು.
ಇದನ್ನೂ ಓದಿ: 73ನೇ ಗಣರಾಜ್ಯೋತ್ಸವ; ಪರೇಡ್ನಲ್ಲಿ ಗಮನ ಸೆಳೆದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು