ಮುಂಬೈ(ಮಹಾರಾಷ್ಟ್ರ): ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈನ ವಿಶೇಷ ಪಿಎಂಎಲ್‌ಎ ಕೋರ್ಟ್ ಆದೇಶಿಸಿದೆ.
ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದ್ದ ನಾಲ್ಕು ದಿನಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ದೇಶ್‌ಮುಖ್ ಅವರನ್ನು ಇಡಿ ಅಧಿಕಾರಿಗಳು ಇಂದು ಕೋರ್ಟ್‌ಗೆ ಹಾಜರಪಡಿಸಿದ್ದರು. ನವೆಂಬರ್ 2ರಂದು ದೇಶ್‌ಮುಖ್ ಅವರನ್ನು ನಾಲ್ಕು ದಿನಗಳ ಮಟ್ಟಿಗೆ ಇಡಿ ವಶಕ್ಕೆ ನೀಡಲಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಅನಿಲ್ ದೇಶ್‌ಮುಖ್ ಅವರ ಪುತ್ರ ಹೃಷಿಕೇಶ್ ದೇಶಮುಖ್ ಅವರಿಗೂ ಸಮನ್ಸ್ ನೀಡಲಾಗಿತ್ತು. ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಹೃಷಿಕೇಶ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ದೇಶಮುಖ್ ವಿರುದ್ಧ ಸುಲಿಗೆ ಹಾಗೂ ಅಕ್ರಮ ಹಣ ವಹಿವಾಟಿನ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ದೇಶಮುಖ್ ಅವರನ್ನು ನ.1 ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು.
ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 100 ಕೋಟಿ ರೂಪಾಯಿ ವಸೂಲಿ ಮಾಡುವಂತೆ ಸಚಿನ್ ವಾಝೆ ಕೇಳಿದ್ದು ಸೇರಿದಂತೆ ಅನಿಲ್ ದೇಶಮುಖ್ ಅವರು ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಿಂಗ್ ಆರೋಪಿಸಿದ್ದರು. ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೇಳಿಕೆ ದಾಖಲಿಸಿಕೊಳ್ಳಲು ಎನ್‌ಐಎ ಕೋರ್ಟ್ ಇಡಿಗೆ ಅನುಮತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಶೀಘ್ರದಲ್ಲೇ ಮುಂಬೈನ ತಲೋಜಾ ಜೈಲಿಗೆ ಭೇಟಿ ನೀಡಿ ವಾಜೆ ಅವರ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ.