ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಜಿ -20 ಶೃಂಗಸಭೆ ಪೂರ್ವಭಾವಿ ಸಭೆಗೆ ತೆರಳುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿ ಮಾತನಾಡಿದರು. ಜಿ 20 ಸಮ್ಮೇಳನದ ಲೋಗೊವು ಪಾರ್ಟಿ ಚಿಹ್ನೆ 'ಲೋಟಸ್' ಬಳಕೆಯಲ್ಲಿತ್ತು. ಆದರೆ, ನಾನು ಈ ವಿಷಯದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ ಏಕೆಂದರೆ ಇದು ದೇಶದ ಗೌರವದ ವಿಷಯವಾಗಿದೆ ಎಂದಿದ್ದಾರೆ.
ಹಾಗೆ ಮಾತನಾಡಿದ ಅವರು ಆದರೆ, ಆ ಲೋಗೊ ಬದಲು ನವಿಲು - ಹುಲಿ, ಸಿಂಹವನ್ನು ಚಿಹ್ನೆಯಾಗಿ ಬಳಸಬಹುದಿತ್ತು. ಏಕೆಂದರೆ ಕಮಲ ಮಾತ್ರ ನಮ್ಮ ರಾಷ್ಟ್ರೀಯ ಚಿಹ್ನೆಯಲ್ಲ. ಉಳಿದ ರಾಷ್ಟ್ರೀಯ ಚಿಹ್ನೆಗಳನ್ನು ಬಳಕೆ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಮಮತಾ ಬ್ಯಾನರ್ಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಮೋದಿ ಅವರು ಮತ ಚಲಾಯಿಸುವ ಸಂದರ್ಭದ ರ್‍ಯಾಲಿ ಬಗ್ಗೆ ಕೇಳಿದಾಗ ಮಮತಾ ಅವರು ಬಹುಶಃ ವಿಶೇಷ ಜನರಿಗೆ ವಿಶೇಷ ನಿಯಮಗಳಿವೆ ಎಂದು ಪ್ರತಿಕ್ರಿಯಿಸಿದ್ದಾರೆ. ಮತದಾನ ನಡೆಯುತ್ತಿರುವಾಗ ರ್‍ಯಾಲಿ ನಡೆಸಲು ಅವಕಾಶ ನೀಡಬಾರದು. ಚುನಾವಣೆ ಎಂದರೆ ಎಲ್ಲರಿಗೂ ಒಂದೇ ನಿಯಮ, ಇಂತಹದ್ದಕ್ಕೆಲ್ಲ ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗದ ಕ್ರಮದ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ನಾಗರಿಕರಂತೆ ಸರದಿಯಲ್ಲಿ ನಿಂತು ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದರು. ಆದರೆ, ಮತದಾನ ಮಾಡುವ ಮೊದಲು ಮತ್ತು ನಂತರ ಅವರು ಮಾಡಿದ ಮೆರವಣಿಗೆಗಳು ಚುನಾವಣಾ ಆಯೋಗದ ನಿಯಮಗಳ ಉಲ್ಲಂಘನೆಯ ಕುರಿತಾದ ಪ್ರಶ್ನೆಗಳನ್ನು ಹುಟ್ಟು ಹಾಕಿವೆ ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಜಿ20 ಅಧ್ಯಕ್ಷತೆ: ಭಾರತದ ಆದ್ಯತೆ ಏನು?