ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಬುಧವಾರ ತಮ್ಮ ತೀರ್ಪು ನೀಡಿದ್ದಾರೆ. ಇದನ್ನು ಏಕನಾಥ್ ಶಿಂಧೆ ಬಣ ಸ್ವಾಗತಿಸಿದ್ದರೆ, ಉದ್ಧವ್ ಠಾಕ್ರೆ ನೇತೃತ್ವದ ಬಣ ಆಕ್ಷೇಪ ವ್ಯಕ್ತಪಡಿಸಿದೆ. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಸಹ ಠಾಕ್ರೆ ಬಣ ನಿರ್ಧರಿಸಿದೆ.
ಏಕನಾಥ್ ಶಿಂಧೆ ಬಣದ 16 ಶಾಸಕರ ಅನರ್ಹತೆಗೆ ಒತ್ತಾಯಿಸಿ ಉದ್ಧವ್ ಠಾಕ್ರೆ ಅರ್ಜಿ ಸಲ್ಲಿಸಿತ್ತು. ಆದರೆ, ಸ್ಪೀಕರ್ ಅವರು ಶಿಂಧೆ ಬಣವೇ ನಿಜವಾದ ಶಿವಸೇನೆ ಎನ್ನುವ ಮೂಲಕ ಎಲ್ಲ ಸದಸ್ಯತ್ವ ಸಿಂಧು ಪ್ರಕಟಿಸಿದ್ದಾರೆ. ಈ ಆದೇಶದ ಬಗ್ಗೆ ಉದ್ಧವ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ಸುಪ್ರೀಂ ಕೋರ್ಟ್ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಆದರೆ, ಶಿವಸೇನೆ ಬಣಗಳು ಸಲ್ಲಿಸಿದ ಅನರ್ಹತೆ ಅರ್ಜಿಗಳ ಬಗ್ಗೆ ತೀರ್ಪು ನೀಡುವಾಗ ಸ್ಪೀಕರ್ ಅವುಗಳನ್ನು ನಿರ್ಲಕ್ಷಿಸಿದ್ದಾರೆ. ಮೂಲ ಪ್ರಕರಣವು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವುದಾಗಿದೆ. ಆದರೆ, ಎರಡೂ ಕಡೆಯ ಒಬ್ಬ ಶಾಸಕರನ್ನೂ ಅನರ್ಹಗೊಳಿಸಲಾಗಿಲ್ಲ ಎಂದು ಹೇಳಿದರು.
ಹೀಗಾಗಿ ಆದೇಶವು ನಿಂತಿರುವ ತಳಹದಿಯೇ ತಪ್ಪಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಸುಪ್ರೀಂ ಕೋರ್ಟ್‌ಗೆ ಮಾಡಿದ ಅವಮಾನ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಅಥವಾ ಜನತೆ ಒಪ್ಪಿಕೊಳ್ಳುವುದಿಲ್ಲ. ನಮ್ಮ ಪಕ್ಷವು ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುತ್ತದೆ. ಅಲ್ಲದೇ, ಸ್ಪೀಕರ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಕುರಿತೂ ಪರಿಶೀಸಲಾಗುತ್ತದೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಮುಂದುವರೆದು, ಮುಂಬರುವ ಚುನಾವಣೆಗೂ ಮುನ್ನ ಈ ಪ್ರಕರಣದ ಬಗ್ಗೆ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವುದಾಗಿ ತಿಳಿಸಿದ ಠಾಕ್ರೆ, ನಮ್ಮ ಬಣದ ವಿಪ್ (ಸುನೀಲ್ ಪ್ರಭು) ಅಧಿಕಾರ ಮತ್ತು ಬಣದ ನಾಯಕ (ಅಜಯ್ ಚೌಧರಿ)ರನ್ನು ನ್ಯಾಯಾಲಯವು ಅಂಗೀಕರಿಸಿದೆ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ - ಕಾಂಗ್ರೆಸ್-ಎನ್‌ಸಿಪಿ: ಇದೇ ವಿಷಯವಾಗಿ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಮಾತನಾಡಿ, ಮಹಾರಾಷ್ಟ್ರದ ಸಹಾನುಭೂತಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಮೇಲಿದೆ. ಅವರು ತಮ್ಮ ಪಕ್ಷದ ವಿರುದ್ಧ ವಿಧಾನಸಭಾ ಸ್ಪೀಕರ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಅನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು. ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿದರೆ, ಸ್ಪೀಕರ್ ನಿರ್ಧಾರವು ಅನಿರೀಕ್ಷಿತವಲ್ಲ. ಇದು ಉದ್ಧವ್ ಠಾಕ್ರೆ ಅವರ ಏಕೈಕ ಹೋರಾಟವಲ್ಲ. ಇದು ಪ್ರಜಾಪ್ರಭುತ್ವವನ್ನು ಕಾಪಾಡುವ ಹೋರಾಟವಾಗಿದೆ. ಅವರು ನ್ಯಾಯವನ್ನು ಕೇಳಬೇಕು ಮತ್ತು ಸುಪ್ರೀಂ ಕೋರ್ಟ್‌ಗೆ ಹೋಗಬೇಕು. ಪ್ರಜಾಪ್ರಭುತ್ವ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸಹ ಸ್ಪೀಕರ್ ತೀರ್ಪು ಆಶ್ಚರ್ಯಕರವಲ್ಲ. ಇದನ್ನು ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕೆಂದು ಸಲಹೆ ಕೊಟ್ಟಿದ್ದಾರೆ.
ನಮ್ಮ ಬಳಿ ಸಂಖ್ಯಾಬಲ ಇದೆ - ಸಿಎಂ ಶಿಂಧೆ: ಮತ್ತೊಂದೆಡೆ, ಸ್ಪೀಕರ್ ತೀರ್ಪು ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲ ಮುಖ್ಯ. ಪ್ರತಿಸ್ಪರ್ಧಿ ಉದ್ಧವ್ ಠಾಕ್ರೆ ನೇತೃತ್ವದ ಬಣದ ವಿರುದ್ಧ ನಮ್ಮ ನೇತೃತ್ವದ ಶಿವಸೇನೆ ಸಂಖ್ಯಾಬಲವನ್ನು ಹೊಂದಿದೆ. ಚುನಾವಣಾ ಆಯೋಗ ಕೂಡ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ನಮ್ಮ ಬಣಕ್ಕೆ ಹಂಚಿಕೆ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ: ಶಿಂಧೆ ಬಣವೇ ನಿಜವಾದ ಶಿವಸೇನೆ, 16 ಶಾಸಕರ ಸದಸ್ಯತ್ವ ಸಿಂಧು: ಮಹಾರಾಷ್ಟ್ರ ಸ್ಪೀಕರ್ ತೀರ್ಪು