ಮ್ಯಾಡ್ರಿಡ್ (ಸ್ಪೇನ್): ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಮೂರು ದಶಕಗಳಿಂದ ಯಾರೂ ವಾಸಿಸದ ಸ್ಪೇನ್ ದೇಶದ ಸಂಪೂರ್ಣ ಗ್ರಾಮವೊಂದನ್ನು 2 ಕೋಟಿ ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ. ಪೋರ್ಚುಗಲ್‌ನ ಗಡಿಯಲ್ಲಿರುವ ಸ್ಪೇನ್‌ನ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿಯು 2,27,000 ಯುರೋಗಳಿಗೆ (ಸುಮಾರು ರೂ. 2 ಕೋಟಿ 16 ಲಕ್ಷ) ಮಾರಾಟಕ್ಕಿದೆ ಎಂದು ಸ್ಪಾನಿಷ್ ಪ್ರಾಪರ್ಟಿ ರಿಟೇಲ್ ವೆಬ್‌ಸೈಟ್ ಐಡಿಯಲಿಸ್ಟಾದಲ್ಲಿ ಪಟ್ಟಿಮಾಡಲಾಗಿದೆ.
44 ಮನೆಗಳು, ಹೋಟೆಲ್, ಚರ್ಚ್, ಶಾಲೆ, ಪುರಸಭೆಯ ಈಜುಕೊಳ ಮತ್ತು ಬ್ಯಾರಕ್‌ಗಳ ಕಟ್ಟಡವನ್ನು ಹೊಂದಿರುವ ಗ್ರಾಮವು ಪ್ರವಾಸಿ ತಾಣವಾಗಿ ಹೊರಹೊಮ್ಮುವ ನಿರೀಕ್ಷೆಯಿತ್ತು. ಆದರೆ ಯೂರೋಜೋನ್ ಬಿಕ್ಕಟ್ಟಿನಿಂದಾಗಿ ಇದು ಕಾರ್ಯರೂಪಕ್ಕೆ ಬರಲಿಲ್ಲ. ಮಾರಾಟಕ್ಕಿರುವ ಗ್ರಾಮವು ಮ್ಯಾಡ್ರಿಡ್‌ನಿಂದ ಕೆಲವು ಗಂಟೆಗಳ ಪ್ರಯಾಣದ ದೂರದಲ್ಲಿದೆ.
ಸ್ಪ್ಯಾನಿಷ್ ರಿಟೇಲ್ ಆಸ್ತಿ ವೆಬ್‌ಸೈಟ್‌ನಲ್ಲಿ ಈಗ ಹೊಸದಾಗಿ ಹರಾಜು ಜಾಹೀರಾತು ಪ್ರಕಟಿಸಲಾಗಿದೆ. ಈಗ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮತ್ತು ರಷ್ಯಾದ ಸುಮಾರು 300ಕ್ಕೂ ಹೂಡಿಕೆದಾರರು ಗ್ರಾಮದ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, 1950 ರ ದಶಕದಿಂದ ವಿದ್ಯುತ್ ಉತ್ಪಾದನಾ ಸಂಸ್ಥೆಯೊಂದು ಸಾಲ್ಟೊ ಡಿ ಕ್ಯಾಸ್ಟ್ರೊದಲ್ಲಿ ಹತ್ತಿರದ ಜಲಾಶಯವನ್ನು ನಿರ್ಮಿಸುತ್ತಿರುವ ಉದ್ಯೋಗಿಗಳಿಗೆ ಈ ಗ್ರಾಮದಲ್ಲಿ ವಸತಿ ವ್ಯವಸ್ಥೆ ಮಾಡಿತ್ತು. ಆದರೆ, ಯೋಜನೆ ಪೂರ್ಣಗೊಂಡ ಬಳಿಕ ಗ್ರಾಮ ನಿರ್ಜನವಾಗಿತ್ತು. ನಾನು ನಗರವಾಸಿಯಾಗಿರುವುದರಿಂದ ಮತ್ತು ಪಿತ್ರಾರ್ಜಿತ ಆಸ್ತಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಗ್ರಾಮವನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಗ್ರಾಮವನ್ನು ಮಾರಾಟ ಮಾಡುತ್ತಿರುವ ಕಾರಣದ ಬಗ್ಗೆ, ಮಾಲೀಕ ರೊಮಾಲ್ಡ್ ರೊಡ್ರಿಗಸ್ ಅವರು ಬರೆದಿದ್ದಾರೆ.