ಸಂಬಲ್ (ಉತ್ತರ ಪ್ರದೇಶ): ತಾಲಿಬಾನ್ ಪರ ಹೇಳಿಕೆ ನೀಡಿದ ಆರೋಪದಲ್ಲಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬರ್ಕ್ ಇದೀಗ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ತಾಲಿಬಾನ್‌ಗಳ ಬಗ್ಗೆ ಸಣ್ಣ ಹೇಳಿಕೆಯನ್ನು ನೀಡಿದ್ದಕ್ಕೆ ನನ್ನನ್ನು ಕ್ರಿಮಿನಲ್ ಎಂದು ಘೋಷಿಸಿದ್ದಾರೆ. ದೇಶದ್ರೋಹಿ ಅಂತ ವಿವಿಧ ಸೆಕ್ಷನ್‌ಗಳ ಅಡಿ ಕೇಸ್ ದಾಖಲಿಸಿದ್ದಾರೆ. ಆದರೆ ಕತಾರ್‌ನಲ್ಲಿ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್ ರಾಜಕೀಯ ನಾಯಕ ಶೇರ್ ಮಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜೈ ಜೊತೆ ಮಾತುಕತೆ ನಡೆಸಿದ್ದಾರೆ. ಏನು ನಡೆಯುತ್ತಿದೆ ಇಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಫ್ಘನ್ ಜನರ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್ ಹೋರಾಟ ಮಾಡುತ್ತಿದೆ. ಭಾರತ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ ಎಂದು ಬರ್ಕ್ ಹೇಳಿದ್ದರು. ಬಿಜೆಪಿ ನಾಯಕರ ದೂರನ್ನು ಆಧರಿಸಿ ಪೊಲೀಸರು ಸಂಬಲ್ ಸಂಸದ ಶಫೀಕರ್ ರೆಹಮಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಸುದ್ದಿಗೋಷ್ಠಿಯೊಂದರಲ್ಲಿ ರೆಹಮಾನ್ ತಾಲಿಬಾನ್ ಹೋರಾಟವನ್ನು ಸಮರ್ಥಿಸಿಕೊಂಡು ಭಾರತದ ಸ್ವಾತಂತ್ರ್ಯಕ್ಕೆ ಹೋಲಿಕೆ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ‘ದೋಹಾ’ ಮಾತುಕತೆ ಅಂತ್ಯ.. ಅಫ್ಘಾನ್ನಲ್ಲಿ ಶಾಂತಿ ನೆಲೆಸಲು ಕ್ರಮಕೈಗೊಳ್ಳಲು ಅಮೆರಿಕ, ಭಾರತ ಕರೆ..
ತಾಲಿಬಾನ್ ಉಗ್ರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ ತಾಲಿಬಾನ್ ಅನ್ನು ಸಮರ್ಥಿಸಿಕೊಳ್ಳುವುದು ಅಥವಾ ಪರವಾದ ಹೇಳಿಕೆ ನೀಡುವುದು ಕಾನೂನಿನ ಅಡಿ ದೇಶದ್ರೋಹವಾಗುತ್ತದೆ ಎಂದು ಸಂಬಲ್ ಎಸ್ಪಿ ಚಕ್ರೇಶ್ ಮಿಶ್ರಾ ಹೇಳಿದ್ದಾರೆ.
ಇನ್ನೊಂದೆಡೆ ಕಳದೆ ಎರಡು ದಿನಗಳ ಹಿಂದೆ ಕತಾರ್‌ನಲ್ಲಿ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್ ರಾಜಕೀಯ ನಾಯಕ ಶೇರ್ ಮಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜೈ ಜೊತೆ ಮಾತುಕತೆ ನಡೆಸಿದ್ದರು.