ಕೋಲ್ಕತ್ತಾ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಗಾಯಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುವ ಸಾಧ್ಯತೆ ಇದೆ.
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ‘ನಾಲ್ಕೈದು’ ಜನ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬ್ಯಾನರ್ಜಿ ಬುಧವಾರ ಆರೋಪಿಸಿದ್ದರು.
ಬುಧವಾರ ಸಂಜೆ 6.15 ರ ಸುಮಾರಿಗೆ ಸ್ಥಳೀಯ ದೇವಾಲಯವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಬ್ಯಾನರ್ಜಿ ರೇಯಾಪರಾ ಬಳಿಯ ಬಿರುಲಿಯಾ ಪ್ರದೇಶದಿಂದ ಹೊರಟಿದ್ದಾಗ ಕಾರಿನಿಂದಲೇ ಜನರ ಬಳಿ ಮತಯಾಚನೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ನಂದಿಗ್ರಾಮ್‌ನಿಂದ ಬಂಗಾಳ ಸಿಎಂ ಅವರನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ಎಡಗಾಲು ಮತ್ತು ಪಾದದ ಮೇಲೆ ತೀವ್ರ ಗಾಯಗಳಾಗಿದ್ದವು. ಮುಖ್ಯಮಂತ್ರಿಯ ಮುಂದೋಳು, ಭುಜ ಮತ್ತು ಕುತ್ತಿಗೆ ಮೇಲೆ ಗಾಯಗಳಾಗಿರುವುದರ ಬಗ್ಗೆ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ನಮೂದಿಸಲಾಗಿದೆ.
ಈಗಾಗಲೇ ರಾಜ್ಯಪಾಲ ಜಗದೀಪ್ ಧಂಕರ್ ಮತ್ತು ಇತರ ಟಿಎಂಸಿ ಸದಸ್ಯರು ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.
ಈ ಹಿಂದೆ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೌರವ್ ಗಂಗೂಲಿ ಅವರನ್ನು ಸಿಎಂ ಮಮತಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಈಗ ಸೌರವ್ ಗಂಗೂಲಿ ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದ್ರೆ ಸೌರವ್ ಭೇಟಿ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.