ಮುಂಬೈ : ದೇಶದ ವಿವಿಧ ಭಾಗಗಳಲ್ಲಿ ಅಗತ್ಯವಿರುವವರಿಗೆ ಎಲೆಕ್ಟ್ರಾನಿಕ್ ರಿಕ್ಷಾ ವಿತರಿಸಲು ನಟ ಸೋನು ಸೂದ್ ನಿರ್ಧರಿಸಿದ್ದಾರೆ.
ಇವರು ತಮ್ಮ ಹುಟ್ಟೂರಾದ ಮೊಗದಲ್ಲಿ ಸುಮಾರು 100 ರಿಕ್ಷಾಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನಿರುದ್ಯೋಗಿಗಳಿಗೆ, ವಿಶೇಷವಾಗಿ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನಟ ಸೋನು ಈ ಯೋಜನೆ ಕೈಗೊಂಡಿದ್ದಾರೆ.
ಉತ್ತರಪ್ರದೇಶದಿಂದ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಇನ್ನಿತರ ರಾಜ್ಯಗಳಿಗೆ ರಿಕ್ಷಾಗಳನ್ನು ವಿತರಿಸಲು ನಾನು ಬಯಸುತ್ತೇನೆ. ಸದ್ಯಕ್ಕೆ, ನಾನು ನನ್ನ ಸ್ವಂತ ಊರಾದ ಮೊಗಾ, ಪಂಜಾಬ್‌ನಲ್ಲಿ ಪ್ರಾರಂಭಿಸಿದ್ದೇನೆ ಎಂದು ನಟ ಸೋನು ಈ ಬಗ್ಗೆ ತಿಳಿಸಿದ್ದಾರೆ.
ಜನರು ಸ್ವಾವಲಂಬಿಗಳಾಗಬೇಕೆಂದು ನಾನು ಬಯಸುತ್ತೇನೆ, ಇದರಿಂದ ಅವರು ಉದ್ಯೋಗ ಪಡೆಯುತ್ತಾರೆ ಮತ್ತು ತಮ್ಮ ಜೀವನದಲ್ಲಿ ದುಡಿದು ಸಂಪಾದಿಸುತ್ತಾರೆ. ಸಾಂಕ್ರಾಮಿಕ ರೋಗದ ನಂತರ ಅನೇಕ ಜನರು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಿರುವುದರಿಂದ ಇ-ರಿಕ್ಷಾಗಳು ಅವರಿಗೆ ಸಹಾಯ ಮಾಡಲು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಹಣವನ್ನು ಅನಗತ್ಯವಾಗಿ ಖರ್ಚು ಮಾಡಬಾರದು, ಬದಲಿಗೆ ಅಗತ್ಯವಿರುವವರಿಗೆ ಇ-ರಿಕ್ಷಾ ನೀಡಿ ಇದರಿಂದ ಅವರು ತಮ್ಮ ಕುಟುಂಬಗಳಿಗೆ ಸಹಾಯ ಮಾಡುತ್ತಾರೆ ಎಂದು ವಿನಂತಿಸಿಕೊಂಡಿದ್ದಾರೆ.