ನವದೆಹಲಿ: ಭದ್ರತಾ ಲೋಪದಿಂದಾಗಿ ಪಂಜಾಬ್ನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿ ರದ್ದಾಗಿ ಭಾರೀ ವಿವಾದ ಉಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರಿಂದ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಘಟನೆ ಕುರಿತು ವಿವರ ಕೇಳಿದ್ದಾರೆ.
ಅಲ್ಲದೇ, ಭದ್ರತಾ ವಿಷಯಗಳಿಗೆ ಮೊದಲ ಆದ್ಯತೆ ನೀಡಿ ಎಂದು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಅವರು ಸೋನಿಯಾ ಗಾಂಧಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪ್ರಧಾನಿಗಳ ಭದ್ರತಾ ವೈಫಲ್ಯದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶ ಮೆಹ್ತಾವ್ ಸಿಂಗ್ ಗಿಲ್, ಗೃಹ ವ್ಯವಹಾರಗಳ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಅನುರಾಗ್ ವರ್ಮಾ ಅವರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿ ಅವರು ರಾಜಕೀಯ ಲಾಭ ಪಡೆಯಲು ಈ ರೀತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಫಿರೋಜ್‌ಪುರ ರ್‍ಯಾಲಿಯಲ್ಲಿ ಜನರು ಹೆಚ್ಚಾಗಿ ಸೇರದ ಕಾರಣ ಮೋದಿ ಅವರು ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ ಎಂದು ರಣದೀಪ್ ಸುರ್ಜೆವಾಲಾ ಮತ್ತು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಏತನ್ಮಧ್ಯೆ ಪಂಜಾಬ್ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಭದ್ರತಾ ವೈಫಲ್ಯದ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಮಾಡಬೇಕು ಎಂದು ಕೋರಿದ್ದರೆ, ಇನ್ನು ಕೆಲ ಕಾಂಗ್ರೆಸ್ಸಿಗರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೂಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಕೋವಿಡ್ ಪಾಸಿಟಿವ್