ನವದೆಹಲಿ: ಮುಂದಿನ ಚುನಾವಣೆಯಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರವನ್ನು ಮಣಿಸಲು ನಾನಾ ರೀತಿಯ ರಣತಂತ್ರಗಳನ್ನು ರೂಪಿಸುತ್ತಿರುವ ಕಾಂಗ್ರೆಸ್ ಪಕ್ಷ ಇಂದು ವಿಪಕ್ಷಗಳ ಸಭೆ ಕರೆದಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಗೆ ಈಗಾಗಲೇ ಹಲವು ನಾಯಕರನ್ನು ಆಹ್ವಾನಿಸಲಾಗಿದೆ.
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಟಿಎಂಸಿ ಅಧ್ಯಕ್ಷೆ ಹಾಗೂ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಶಿವಸೇನಾ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಸಿಪಿಐ(ಎಂ) ಸೀತಾರಾಮ್ ಯೆಚೂರಿ ಹಾಗು ಎಸ್ಪಿಯ ರಾಮ್‌ಗೋಪಾಲ್ ಯಾದವ್ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಇತ್ತೀಚಿನ ಮುಂಗಾರು ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಿಪಕ್ಷಗಳು ಏಕತೆ ಪ್ರದರ್ಶಿಸಿದ್ದವು. ಪೆಗಾಸಸ್ ಸ್ಪೈವೇರ್, ಕೃಷಿ ಕಾನೂನುಗಳು, ಹಣದುಬ್ಬರ, ಇಂಧನ ಬೆಲೆ ಏರಿಕೆ ಮತ್ತು ಇತರ ವಿಚಾರಗಳನ್ನು ಕೈಗೆತ್ತಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು.
ಇದನ್ನೂ ಓದಿ: 'ರಾಹುಲ್..ನೀನು ನನ್ನ ಮಗ' - ರಾಗಾ ಜನನವನ್ನು ಕಂಡಿದ್ದ ದಾದಿಯ ಭಾವನಾತ್ಮಕ ವಿಡಿಯೋ ವೈರಲ್
ವಿರೋಧ ಪಕ್ಷಗಳು ಇದೀಗ ಬಿಜೆಪಿ ವಿರುದ್ಧ ಮತ್ತಷ್ಟು ಒಗ್ಗಟ್ಟಿನ ಹೋರಾಟಕ್ಕೆ ಯೋಜನೆಗಳನ್ನು ರೂಪಿಸುತ್ತಿವೆ. ಮುಂಗಾರು ಅಧಿವೇಶನ ಮುಗಿದ ನಂತರವೂ ಇದೇ ವೇಗವನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.