ಪಣಜಿ(ಗೋವಾ): ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಸಾವಿನ ತನಿಖೆ ನಡೆಯುತ್ತಿರುವ ಮಧ್ಯೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು ಅನುಮಾನಾಸ್ಪದ ರೀತಿಯಲ್ಲಿ ಸೋನಾಲಿ ಫೋಗಟ್ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಮಹತ್ವದ ತಿರುವು ಸಹ ಸಿಕ್ಕಿತ್ತು. ಅವರ ಮೃತದೇಹದ ಮೇಲೆ ಅನೇಕ ರೀತಿಯ ಗಾಯದ ಗುರುತುಗಳಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿತ್ತು. ಜೊತೆಗೆ ಅವರು ಗೋವಾದ ರೆಸ್ಟೋರೆಂಟ್ವೊಂದರಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ದೃಶ್ಯಾವಳಿಯ ವಿಡಿಯೋಗಳು ವೈರಲ್ ಆಗಿದ್ದವು. ಇದರಲ್ಲಿ ಬಲವಂತವಾಗಿ ಬಾಟಲಿಯಿಂದ ಏನೋ ಕುಡಿಸುತ್ತಿರುವ ದೃಶ್ಯ ಸೆರೆಯಾಗಿತ್ತು.
ಇದನ್ನೂ ಓದಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೂ ಮುನ್ನದ ಮತ್ತೊಂದು ಸಿಸಿಟಿವಿ ದೃಶ್ಯ ಬಹಿರಂಗ
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡು ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ, ಈ ಕೇಸನ್ನು ಸಿಬಿಐಗೆ ವಹಿಸುವಂತೆ ಸೋನಾಲಿ ಪೋಷಕರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಗೋವಾ ಸಿಎಂ ಇಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಆಗಸ್ಟ್ 23ರಂದು ಸೋನಾಲಿ ಫೋಗಟ್ ಗೋವಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಗೋವಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಪ್ರಕರಣದ ಸಿಬಿಐ ತನಿಖೆಗೋಸ್ಕರ ಸೋನಾಲಿ ಕುಟುಂಬ ಗೋವಾ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು. ಜೊತೆಗೆ ಮುಖ್ಯನ್ಯಾಯಮೂರ್ತಿ ಯು ಯು ಲಲಿತ್ ಅವರಿಗೂ ಪತ್ರ ಬರೆದಿದ್ದರು.