ಪಣಜಿ: ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉತ್ತರ ಗೋವಾದ ಅಂಜುನಾದಲ್ಲಿರುವ ವಿವಾದಾತ್ಮಕ ರೆಸ್ಟೋರೆಂಟ್ ಅನ್ನು ಗೋವಾ ಸರ್ಕಾರ ಶುಕ್ರವಾರ ಬೆಳಗ್ಗೆ ಕೆಡವಲು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಮಧ್ಯಾಹ್ನದ ಹೊತ್ತಿಗೆ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಎಂದು ತಿಳಿದು ಬಂದಿದೆ.
ಹರಿಯಾಣದ ಭಾರತೀಯ ಜನತಾ ಪಕ್ಷದ ನಾಯಕಿ ಸೋನಾಲಿ ಫೋಗಟ್ ಅವರು ಇದೇ ರೆಸ್ಟೋರೆಂಟ್ ನಲ್ಲಿ ಕೆಲವೇ ದಿನಗಳ ಹಿಂದೆ ಸಂಶಯಾಸ್ಪದವಾಗಿ ಮೃತಪಟ್ಟಿದ್ದರು.
ಸೋನಾಲಿ ಫೋಗಟ್ ಮೃತಪಟ್ಟಿದ್ದ ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿರುವ ಕರ್ಲೀಸ್ ಹೆಸರಿನ ರೆಸ್ಟೋರೆಂಟ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದೆ. ಫೋಗಟ್ ಸಾಯುವ ಕೆಲವು ಗಂಟೆಗಳ ಮೊದಲು ಔಟ್‌ಲೆಟ್‌ನಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿತ್ತು. ಫೋಗಟ್ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರಲ್ಲಿ ಅದರ ಮಾಲೀಕ ಎಡ್ವಿನ್ ನೂನ್ಸ್ ಕೂಡ ಸೇರಿದ್ದಾರೆ. ಇವರಿಗೆ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ.
ಜಿಲ್ಲಾಡಳಿತದ ಡೆಮಾಲಿಷನ್ ಸ್ಕ್ವಾಡ್ ಅಂಜುನಾ ಪೊಲೀಸ್ ಸಿಬ್ಬಂದಿಯೊಂದಿಗೆ ಬೆಳಗ್ಗೆ 7.30 ರ ಸುಮಾರಿಗೆ ಬೀಚ್‌ಗೆ ಆಗಮಿಸಿದ್ದು, ಸಿಆರ್‌ಝಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ನೋ ಡೆವಲಪ್‌ಮೆಂಟ್ ಝೋನ್ ನಲ್ಲಿ ನಿರ್ಮಿಸಲಾಗಿದ್ದ ರೆಸ್ಟೊರೆಂಟ್ ಅನ್ನು ಕೆಡವಲು ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಗೋವಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (GCZMA) 2016 ರ ಪ್ರಕಾರ ಡೆಮಾಲಿಷನ್ ಆದೇಶದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಯಿಂದ ಯಾವುದೇ ತಡೆಯಾಜ್ಞೆ ಪಡೆಯಲು ಅದರ ಮಾಲೀಕರು ವಿಫಲವಾದ ನಂತರ ರೆಸ್ಟೋರೆಂಟ್ ವಿರುದ್ಧ ಕ್ರಮ ಪ್ರಾರಂಭಿಸಲಾಗಿದೆ.
ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಎನ್‌ಜಿಟಿ ಪೀಠವು ಸೆಪ್ಟೆಂಬರ್ 6 ರಂದು ಪ್ರಕರಣದ ವಿಚಾರಣೆ ನಡೆಸಿತು. ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪೀಠ ಎತ್ತಿ ಹಿಡಿದಿತ್ತು.
ತೆರವು ಕಾರ್ಯಾಚರಣೆಗೆ ತಡೆ: ತುರ್ತು ಅರ್ಜಿ ವಿಚಾರಣೆ ಅಂಗೀಕರಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಾಹ್ನ ಗೋವಾದ ಕರ್ಲೀಸ್ ರೆಸ್ಟೋರೆಂಟ್ ಧ್ವಂಸಕ್ಕೆ ತಡೆ ನೀಡಿದೆ.
ಇದನ್ನೂ ಓದಿ: ಫೋಗಟ್ ಸಾವು ಪ್ರಕರಣ: ಕರ್ಲಿಸ್ ಕ್ಲಬ್ ಮಾಲೀಕ, ಡ್ರಗ್ ಪೆಡ್ಲರ್ ಬಂಧನ