ಥಾಣೆ (ಮಹಾರಾಷ್ಟ್ರ): 20 ವರ್ಷದ ಹುಡುಗ ತನ್ನ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಇಲ್ಲಿಯ ಡೊಂಬಿವಿಲಿ ಪೂರ್ವದ ಖಂಬಲ್ಪಾಡಾ ಪ್ರದೇಶದ ಚಾಲಿಯಲ್ಲಿ ನಡೆದಿದೆ. ಆರೋಪಿ ತೇಜಸ್ ಶ್ಯಾಮಸುಂದರ್ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ಯಾಮಸುಂದರ್ ಶಿಂಧೆ (68) ಕೊಲೆಯಾದ ವ್ಯಕ್ತಿ.
ವಿವರ: ತಂದೆ ಶ್ಯಾಮಸುಂದರ್, ಮಗ ತೇಜಸ್ನನ್ನು ಪದೇ ಪದೆ ನಿಂದಿಸುತ್ತಿದ್ದರಂತೆ. ಬುಧವಾರ ತೇಜಸ್ ಅವರ ತಾಯಿ ಕೆಲಸದ ನಿಮಿತ್ತ ಸಂಜೆ ಹೊರಹೋಗಿದ್ದಾಗ ಅಪ್ಪ- ಮಗನ ನಡುವೆ ಜಗಳ ನಡೆದಿದೆ. ಕೋಪಗೊಂಡ ಮಗ ತೇಜಸ್ ತಂದೆ ಶ್ಯಾಮಸುಂದರ್ರನ್ನು ಹತ್ಯೆ ಮಾಡಿದ್ದಾನೆ ಎಂದು ತಿಲಕ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಾಂಡುರಂಗ ತಿಥೆ ತಿಳಿಸಿದರು.
ಇನ್ಸ್ಪೆಕ್ಟರ್ ಪಾಂಡುರಂಗ ತಿಥೆ ಹೇಳುವಂತೆ, ಶ್ಯಾಮಸುಂದರ್ ಶಿಂಧೆ ತನ್ನ ಪತ್ನಿ ಮತ್ತು ಮಗ ತೇಜಸ್‌ನೊಂದಿಗೆ ಡೊಂಬಿವಿಲಿ ಪೂರ್ವದ ಖಂಬಲ್ಪಾಡ ಪ್ರದೇಶದ ಭೋರ್‌ವಾಡಿ ಎಂಬ ಪ್ರದೇಶದಲ್ಲಿ ಚಿಕ್ಕ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಶ್ಯಾಮಸುಂದರ್ ಮುಂಬೈನ ಮಹಾನಗರ ಪಾಲಿಕೆಯ ಭದ್ರತಾ ವಿಭಾಗದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದು, 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಪತ್ನಿ ಮನೆ ಕೆಲಸ ಮಾಡಿಕೊಂಡಿದ್ದರು. ಆರೋಪಿ ತೇಜಸ್ನನ್ನು ಶ್ಯಾಮಸುಂದರ್ ಶಿಂದೆ ನಿರಂತರವಾಗಿ ನಿಂದಿಸಿ ತೊಂದರೆ ಕೊಡುತ್ತಿದ್ದರು.
ನಿನ್ನೆ ಸಂಜೆಯೂ ತೇಜಸ್‌ಗೆ ಬೈದಿದ್ದಾರೆ. ಇದರಿಂದ ಕೋಪಗೊಂಡ ಆತ ರುಬ್ಬುವ ಕಲ್ಲಿನಿಂದ ತಂದೆಯ ತಲೆಗೆ ಹೊಡೆದು ನಂತರ ಹರಿತ ವಸ್ತುವಿನಿಂದ ಇರಿದಿದ್ದಾನೆ. ಹತ್ಯೆಯ ಬಳಿಕ ಸ್ವತಃ ಆರೋಪಿ ಪೊಲೀಸ್ ಠಾಣೆಗೆ ಕರೆ ಮಾಡಿ ಕೃತ್ಯವನ್ನು ತಿಳಿಸಿದ್ದಾನೆ. ಮಾಹಿತಿ ಪಡೆದ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತೇಜಸ್ನನ್ನು ಬಂಧಿಸಿದ್ದಾರೆ. ಶಾಮ್ಸುಂದರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿಯನ್ನು ಕಲ್ಯಾಣ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೂರತ್‌ನಲ್ಲೂ ಇಂಥದ್ದೇ ಘಟನೆ: ಕೆಲ ದಿನಗಳ ಹಿಂದೆ ಇಲ್ಲಿನ ಅಮ್ರೋಲಿ ಎಂಬಲ್ಲಿ ಲೈಟ್ ಆನ್ ಆಫ್ ಮಾಡುತ್ತಿದ್ದ ಮಗನಿಗೆ ತಂದೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡ ಆತ ತಂದೆಗೆ ಹೊಡೆದು ಕೊಲೆ ಮಾಡಿದ್ದ. ಅಮ್ರೋಲಿ ಮತ್ತು ಒಡಿಶಾ ಮೂಲದ ಸವಾಯಿ ಕುಟುಂಬದ ಶಂಕರ್ ಮುಕಬದಿರ್ ಎಂಬಾತ ಮನೆಯಲ್ಲಿನ ಲೈಟ್ ಸ್ವಿಚ್ ಅನ್ನು ಆನ್ ಆಫ್ ಮಾಡುತ್ತಿದ್ದ. ಇದನ್ನು ಕಂಡು ತಂದೆ ಮಗ ಮುಕಬದಿರ್ಗೆ ಬೈದಿದ್ದಾರೆ. ಇಬ್ಬರ ನಡುವೆ ಗಲಾಟೆ ನಡೆದು ಕೋಪಗೊಂಡ ಮಗ ತಂದೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.
ಇದನ್ನೂ ಓದಿ: ಲೈಟ್ ಆನ್ ಆಫ್ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆ: ಮಸಾಲೆ ರುಬ್ಬುವ ಕಲ್ಲಿನಿಂದ ಅಪ್ಪನ ಕೊಲೆ