ಬಿಜಾಪುರ(ಛತ್ತೀಸ್ಗಢ): ನಕಲಿ ಎನ್ಕೌಂಟರ್ ಮಾಡಿ ಸಾಯಿಸಿದ್ದಾರೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೃತದೇವಹನ್ನು ಅಂತ್ಯಸಂಸ್ಕಾರ ಮಾಡಿಲ್ಲ. ಬರೋಬ್ಬರಿ 2 ವರ್ಷದಿಂದ ಅಂತ್ಯಕ್ರಿಯೆ ನಡೆಸದೇ ಶವವನ್ನು ಹಾಗೆಯೇ ಉಳಿಸಿಕೊಂಡಿರುವ ಈ ವಿಚಿತ್ರ ಘಟನೆ ಛತ್ತೀಸ್ಗಢದಲ್ಲಿ ಬೆಳಕಿಗೆ ಬಂದಿದೆ.
ಬಿಜಾಪುರ ಜಿಲ್ಲೆಯ ಗಂಪುರ್ ಎಂಬಲ್ಲಿ 19 ಮಾರ್ಚ್, 2020 ರಲ್ಲಿ ನಕ್ಸಲರನ್ನು ಮಟ್ಟಹಾಕಲು ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಅಲ್ಲಿಯ ವ್ಯಕ್ತಿಯೊಬ್ಬನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದರು. ಬಳಿಕ ಶವವನ್ನು ಕುಟುಂಬಸ್ಥರ ವಶಕ್ಕೆ ನೀಡಿದ್ದರು.
ಇದರಿಂದ ಕೆರಳಿದ ಕುಟುಂಬಸ್ಥರು ಮೃತಪಟ್ಟ ವ್ಯಕ್ತಿ ನಕ್ಸಲ್ ಆಗಿರಲಿಲ್ಲ. ಪೊಲೀಸರು ನಕಲಿ ಎನ್ಕೌಂಟರ್ ಮಾಡಿ ಸಾಯಿಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ದೂರು ನೀಡಿದ್ದಾರೆ. ಅಲ್ಲದೇ ಅಲ್ಲಿಯವರೆಗೂ ಶವಸಂಸ್ಕಾರ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸರ್ಕಾರವೂ ಕೂಡ ತನಿಖೆಗೆ ಆದೇಶಿಸಿದೆ.
ಮೃತಪಟ್ಟ ವ್ಯಕ್ತಿ ನಕ್ಸಲ್ ಪಡೆಯಲ್ಲಿದ್ದ. ಈತನ ತಲೆಗೆ 2 ಲಕ್ಷ ರೂಪಾಯಿ ಘೋಷಿಸಲಾಗಿತ್ತು. ಈತ ಐಇಡಿ ಸ್ಫೋಟಕಗಳಲ್ಲಿ ಪರಿಣತನಾಗಿದ್ದ. ಹೀಗಾಗಿ ನಕ್ಸಲ್ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಬಲಿಯಾಗಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ನಿರಾಕರಿಸಿರುವ ಕುಟುಂಬಸ್ಥರು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಅಲ್ಲಿಯವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಶವ ಸಂರಕ್ಷಿಸಿದ್ದು ಹೇಗೆ?: ಎರಡು ವರ್ಷ ಮೃತದೇಹವನ್ನು ಸಂರಕ್ಷಿಸಿಡುವುದು ದುರ್ಲಭ. ಆದರೆ, ಒಂದಲ್ಲ ಒಂದು ದಿನ ನ್ಯಾಯ ಸಿಗುತ್ತದೆ ಎಂಬ ಆಸೆಯಲ್ಲಿರುವ ಕುಟುಂಬಸ್ಥರು ಶವಕ್ಕೆ ವಿವಿಧ ಗಿಡಮೂಲಿಕೆಗಳನ್ನು ಲೇಪಿಸಿ ಅದು ಕೆಡದಂತೆ ನೋಡಿಕೊಂಡಿದ್ದಾರೆ. ಬಿಳಿಬಟ್ಟೆಯಿಂದ ಶವವನ್ನು ಸುತ್ತಿ, 6 ಅಡಿ ಗುಂಡಿ ತೋಡಿ ಅದರಲ್ಲಿ ಇಡಲಾಗಿದೆ. ಅದರ ಮೇಲೆ ಮಣ್ಣು ಹಾಕದೇ ಸುತ್ತಲೂ ಉಪ್ಪು, ಎಣ್ಣೆ, ಹಲವು ಗಿಡಮೂಲಿಕೆಗಳನ್ನು ಇಡಲಾಗಿದೆ.
ಗುಂಡಿಯ ಮೇಲೆ ಮರದ ತುಂಡುಗಳನ್ನು ಇಟ್ಟು ಹೊದಿಸಲಾಗಿದೆ. ಬಿಸಿಲು, ಮಳೆಯಿಂದ ರಕ್ಷಿಸಲು ಸುತ್ತಲೂ ಪಾಲಿಥಿನ್ ಶೆಡ್ ಹಾಕಲಾಗಿದೆ. ಆದರೆ, ಇಷ್ಟೆಲ್ಲಾ ಮಾಡಲಾಗಿದ್ದರೂ ಸಹ ಶವ ಅಸ್ತಿಪಂಜರವಾಗಿ ಮಾರ್ಪಟ್ಟಿದೆ ಎಂದು ತಿಳಿದುಬಂದಿದೆ.
ಓದಿ: 10 ದಿನಗಳ ಯುದ್ಧದಲ್ಲಿ ರಷ್ಯಾ ಪಡೆಗಳ 10 ಸಾವಿರ ಮಂದಿ ಸಾವು: ಉಕ್ರೇನ್