ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಸರಿಯಾಗಿ ಓದದಿದ್ದರೆ ಕತ್ತೆ ಕಾಯಲು ಕೂಡ ಯೋಗ್ಯರಿಲ್ಲ ಎಂಬ ಮಾತನ್ನು ಮಕ್ಕಳಿಗೆ ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆದರೆ, ಅದೇ ಕತ್ತೆಗಳನ್ನು ಸಾಕುವ ಮೂಲಕ ಲಕ್ಷಗಟ್ಟಲೆ ಆದಾಯ ಗಳಿಸಬಹುದು ಎಂಬುದನ್ನು ಸಾಫ್ಟ್‌ವೇರ್ ಇಂಜಿನಿಯರ್ವೊಬ್ಬರು ಸಾಬೀತುಪಡಿಸಿದ್ದಾರೆ.
ಹೌದು, ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನ ಟೆಕ್ಕಿ ಕಿರಣ್ ಕತ್ತೆಗಳ ಸಾಕಾಣಿಕೆ ಮೂಲಕವೇ ಗಮನ ಸೆಳೆದಿದ್ದಾರೆ. ರಾಜನಗರ ಮಂಡಲದ ಮಲ್ಲಂಪುಡಿಯಲ್ಲಿ 10 ಎಕರೆ ತೋಟವನ್ನು ಗುತ್ತಿಗೆ ಪಡೆದು ಕತ್ತೆಗಳ ಸಾಕಾಣಿಕೆ ಮಾಡುತ್ತಿದ್ದು, ಅದಕ್ಕೆ ಅಕ್ಷಯ ಡಾಂಕಿ ಫಾರ್ಮ್ ಎಂದು ಹೆಸರಿಟ್ಟಿದ್ದಾರೆ. ಈ ಫಾರ್ಮ್ ಮೂಲಕವೇ ಸಾಕಷ್ಟು ಆದಾಯವನ್ನೂ ಪಡೆಯುತ್ತಿದ್ದಾರೆ.
ಭಾರಿ ದುಬಾರಿ ಕತ್ತೆ ಹಾಲು: ಕತ್ತೆ ಹಾಲಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ರಾಮಬಾಣ ಎಂದೂ ಕರೆಯಲಾಗುತ್ತಿದೆ. ಹೀಗಾಗಿಯೇ ಕತ್ತೆ ಹಾಲಿಗೆ ಸಾಕಷ್ಟು ಬೇಡಿಕೆ ಇದೆ ಮತ್ತು ಅಷ್ಟೇ ದುಬಾರಿ ಈ ಕತ್ತೆ ಹಾಲು. ಇದನ್ನು ಅರಿತೇ ಕಿರಣ್ ಡಾಂಕಿ ಫಾರ್ಮ್ ಆರಂಭಿಸಿದ್ದಾರೆ.
ಗುಜರಾತ್, ಉತ್ತರ ಪ್ರದೇಶ, ಬಿಹಾರ ಹೀಗೆ ವಿವಿಧ ರಾಜ್ಯಗಳಿಗೆ ತೆರಳಿ ಕತ್ತೆಗಳನ್ನು ಖರೀದಿಸಿ ತಂದಿದ್ದಾರೆ. ತಮ್ಮ ಫಾರ್ಮ್‌ನಲ್ಲಿ ಗುಜರಾತ್‌ನ ಅಲಾರಿ, ಮಹಾರಾಷ್ಟ್ರದ ಕಟ್ವಾಡ್, ಆಫ್ರಿಕಾದ ಇಥಿಯೋಪಿಯಾ ಮತ್ತು ಸ್ಥಳೀಯ ತಳಿಯ 120 ಕತ್ತೆಗಳನ್ನು ಯುವ ಸಾಫ್ಟ್‌ವೇರ್ ಸಾಕುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಕತ್ತೆ ಹಾಲಿನ ದರ ಲೀಟರ್‌ಗೆ 5 ರಿಂದ 7 ಸಾವಿರ ರೂಪಾಯಿ ಇದೆ. ಈ ಹಾಲನ್ನು ವಿವಿಧ ರಾಜ್ಯಗಳು ಮತ್ತು ಇತರ ದೇಶಗಳಲ್ಲಿ ಇರುವ ಕಂಪನಿಗಳಿಗೂ ಸರಬರಾಜು ಮಾಡುತ್ತಿದ್ದಾರೆ.
ಕತ್ತೆಗಳ ಸಾಕಾಣಿಕೆಯೂ ಕಷ್ಟ: ಈ ಕತ್ತೆಗಳ ಸಾಕಾಣಿಕೆಯು ಕೂಡ ಅಷ್ಟು ಸುಲಭವಲ್ಲ ಎನ್ನುತ್ತಾರೆ ಅಕ್ಷಯ ಡಾಂಕಿ ಫಾರ್ಮ್ನ ಕಿರಣ್. ಗುಣಮಟ್ಟದ ಪ್ರತಿ ಕತ್ತೆ ಬೆಲೆಯ 50 ಸಾವಿರದಿಂದ ಒಂದು ಲಕ್ಷ ರೂ. ಇದೆ. ಅವುಗಳ ಪೋಷಣೆ ಸಹ ತುಂಬಾ ದುಬಾರಿಯಾಗಿದೆ. ಅದಕ್ಕಾಗಿಯೇ ಕತ್ತೆಗಳಿಗೆ ಆಹಾರ ಮತ್ತು ತೋಟದ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಕಿರಣ್ ತಿಳಿಸುತ್ತಾರೆ.
ಜೊತೆಗೆ ಕತ್ತೆ ಹಾಲನ್ನು ಸಂರಕ್ಷಿಸುವುದು ಸೂಕ್ಷ್ಮವಾದ ಕೆಲಸ. ಒಂದು ಲೀಟರ್ ಬಾಟಲಿಗಳಲ್ಲಿ ಹಾಲು ತುಂಬಿ ಫ್ರೀಜರ್‌ನಲ್ಲಿ ಇಡಲಾಗುತ್ತದೆ. ಅಲ್ಲದೇ, ಐಸ್‌ಬಾಕ್ಸ್‌ನಲ್ಲಿಟ್ಟು ಫಾರ್ಮಾ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಕಿರಣ್ ಮಾಹಿತಿ ನೀಡಿದರು.
ಈ ಯೋಚನೆ ಬಂದಿದ್ದು ಹೇಗೆ?: ಕುರಿ, ಕೋಳಿ ಹಾಗೂ ಹಸುಗಳ ಸಾಕಾಣಿಕೆ ಸಾಮಾನ್ಯ. ಆದರೆ, ಈ ಕತ್ತೆಗಳ ಸಾಕಾಣಿಕೆ ಮಾಡಬೇಕೆಂಬ ಆಲೋಚನೆಗೆ ಕಿರಣ್ಗೆ ಬಂದಿರುವ ಸಂದರ್ಭವೇ ಅಚ್ಚರಿ. ಇವರ ಮಗ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ. ಆಗ ಕತ್ತೆ ಹಾಲು ಕುಡಿಸಿದರೆ ಕಡಿಮೆಯಾಗುತ್ತದೆ ಎಂದು ಕೆಲವರು ಸಲಹೆ ನೀಡಿದ್ದರು. ಅಂತೆಯೇ, ಹಾಲಿನಿಂದ ತನ್ನ ಮಗನಿಗೆ ಸಮಸ್ಯೆಯಿಂದ ಪರಿಹಾರ ಸಿಕ್ಕಿರುವುದನ್ನು ಕಿರಣ್ ಗಮನಿಸಿದರು. ಅದೇ ಸಮಯದಲ್ಲಿ ಕತ್ತೆ ಹಾಲಿನ ಬೆಲೆಯು ಅವರನ್ನು ಆಲೋಚಿಸುವಂತೆ ಮಾಡಿತು. ಇದರ ಪರಿಣಾಮವೇ ಅಕ್ಷಯ ಡಾಂಕಿ ಫಾರ್ಮ್.
ಗೇಲಿ ಮಾಡಿದ್ದ ಸ್ನೇಹಿತರು: ಕತ್ತೆಗಳ ಸಾಕಾಣಿಕೆ ಮಾಡಬೇಕೆಂಬ ಕಿರಣ್ಗೆ ಆಲೋಚನೆ ಬಂದಾಗ ಅವರ ಸಹೋದ್ಯೋಗಿಗಳು ಮತ್ತು ಪರಿಚಯಸ್ಥರು ಗೇಲಿ ಮಾಡಿದ್ದರು. ಆದರೆ, ಕತ್ತೆಗಳ ಹಾಲಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದ ಕಿರಣ್, ಸದ್ಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಪ್ರಸ್ತುತ ಹಾಲು ಮಾರಾಟದತ್ತ ಗಮನ ಹರಿಸಿರುವ ಅವರು, ಮುಂದೆ ಕತ್ತೆ ಹಾಲಿನ ಪುಡಿಯನ್ನೂ ತಯಾರಿಸುವ ಆಲೋಚನೆಯಲ್ಲೂ ಇದ್ದಾರೆ.
ಇದನ್ನೂ ಓದಿ: ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಮೂಲಕ 12,300 ಕೋರ್ಸ್ಗಳು ಉಚಿತ.. ರಾಜ್ಯದ 24 ವಿವಿಗಳೊಂದಿಗೆ ಒಡಂಬಡಿಕೆ