ಶ್ರೀನಗರ(ಜಮ್ಮು&ಕಾಶ್ಮೀರ) : ಇಲ್ಲಿನ ಸ್ಕೀ-ರೆಸಾರ್ಟ್, ಗುಲ್ಮಾರ್ಗ್, ಪಹಲ್ಗಾಮ್, ಸೋನಾಮಾರ್ಗ್ ಮತ್ತು ಬೇಸಿಗೆಯ ರಾಜಧಾನಿ ಶ್ರೀನಗರ ಸೇರಿದಂತೆ ಕಾಶ್ಮೀರದ ಭಾಗಗಳಲ್ಲಿ ಹಿಮಪಾತವಾಗಿದೆ. ಇದರಿಂದ ತಾಪಮಾನವು ಮತ್ತಷ್ಟು ಕಡಿಮೆಯಾಗಿದೆ.
ಶ್ರೀನಗರ ವಿಮಾನ ನಿಲ್ದಾಣದ ರನ್ ವೇ ಹಿಮಾವೃತವಾಗಿದೆ. ಹಿಮಪಾತ ಆಗುತ್ತಿರುವುದರಿಂದ ದೂರದ ವೀಕ್ಷಣೆ ಸಾಧ್ಯವಾಗದೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತ ಮತ್ತು ಮಳೆಯ ಮುನ್ಸೂಚನೆಯಿದೆ. ಈ ಹಿನ್ನೆಲೆ ಸ್ಥಳೀಯ ಹವಾಮಾನ ಇಲಾಖೆ (MeT) ಇಂದು (ಜ.8) ಸಂಜೆಯವರೆಗೆ 'ರೆಡ್ ಅಲರ್ಟ್' ಘೋಷಿಸಿದೆ. ಜತೆಗೆ ಹಿಮಕುಸಿತ ಪೀಡಿತ ಪ್ರದೇಶಗಳಿಗೆ ಜನರು ಹೋಗದಂತೆ ಮತ್ತು ಸಂಚಾರ ಸಲಹೆ ಅನುಸರಿಸುವಂತೆ ಜನರಿಗೆ ಮನವಿ ಮಾಡಿದೆ.
ಹವಾಮಾನ ಇಲಾಖೆಯ ಸಲಹೆಯಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆಯಾದ ಶ್ರೀನಗರ-ಜಮ್ಮು ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಶ್ರೀನಗರ-ಲೇಹ್ ಹೆದ್ದಾರಿಯನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ. ಜತೆಗೆ ಶ್ರೀನಗರ-ಸೋನಾಮಾರ್ಗ್-ಗುಮ್ರಿ ರಸ್ತೆ, ಶೋಪಿಯಾನ್ ಅನ್ನು ಪೂಂಚ್-ರಜೌರಿ ಜಿಲ್ಲೆಗಳೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯಲ್ಲಿ ಸಹ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆ ಮುಂದೂಡಿಕೆ : ಕಾಶ್ಮೀರ ವಿಶ್ವವಿದ್ಯಾಲಯದ ಅಧಿಕಾರಿಗಳು ಇಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಇಂದು (ಜ.8) ನಿಗದಿಯಾಗಿದ್ದ ಕಾಶ್ಮೀರ ವಿಶ್ವವಿದ್ಯಾಲಯದ ಎಲ್ಲಾ ಯುಜಿ/ಪಿಜಿ/ವೃತ್ತಿಪರ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
ವಿಮಾನಯಾನ ವಿಳಂಬ : ಮಳೆ ಮತ್ತು ಹಿಮಪಾತದಿಂದ ದೂರದ ವೀಕ್ಷಣೆ ಸಾಧ್ಯವಾಗದೆ ಶ್ರೀನಗರ ವಿಮಾನ ನಿಲ್ದಾಣದಿಂದ ಕಾರ್ಯ ನಿರ್ವಹಿಸುವ ವಿಮಾನಗಳು ವಿಳಂಬವಾಗಿವೆ. ಹಿಮಪಾತವು 11 ಗಂಟೆಯವರೆಗೆ ಮುಂದುವರಿಯುವ ಸಾಧ್ಯತೆಯಿದೆ. ದಯವಿಟ್ಟು ಪ್ರಯಾಣಿಕರು ಸಹಕರಿಸಬೇಕು ಎಂದು ಶ್ರೀನಗರ ವಿಮಾನ ನಿಲ್ದಾಣ ಸಿಬ್ಬಂದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಾದರಿಯಾದ ಛತ್ತೀಸ್ಗಢದ ಅಂಬಿಕಾಪುರ ನಗರಸಭೆ : ಲೆಮನ್ ಗ್ರಾಸ್ ಬೆಳೆಸಿ ಆದಾಯ ಗಳಿಕೆ