ಜೋಹಾನ್ಸ್‌ಬರ್ಗ್: ವಿಮಾನದ ಪ್ರಯಾಣ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಖುಷಿ ಇರುತ್ತದೆ. ಇನ್ನೂ ಕೆಲವರಿಗೆ ಭಯ ಕೂಡಾ ಆವರಿಸಿರುತ್ತದೆ. ಆದರೆ, ಇದರಲ್ಲಿನ ಪ್ರಯಾಣ ಅಷ್ಟೇ ಡೇಂಜರಸ್ ಕೂಡಾ ಹೌದು. ಕಾರಣ, ಇಲ್ಲಿ ನೂರಾರು ಜನ ಪ್ರಯಾಣಿಸುವುದರಿಂದ ಅವರೆಲ್ಲರ ಸುರಕ್ಷತೆ ಅತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ವಿಮಾನದ ಹಾರಾಟದ ವೇಳೆ ಒಂದು ಸಣ್ಣ ವಸ್ತು ಅಡ್ಡ ಬಂದರೂ ತುರ್ತು ಭೂಸ್ಪರ್ಶ ಮಾಡಲಾಗುತ್ತದೆ. ದಕ್ಷಿಣ ಆಫ್ರಿಕಾದ ವೋರ್ಸೆಸ್ಟರ್‌ನಿಂದ ನೆಲ್ಸ್‌ಪ್ರೂಟ್‌ಗೆ ಹಾರಾಟ ನಡೆಸುತ್ತಿದ್ದ ವಿಮಾನದ ಕಾಕ್‌ಪಿಟ್‌ನಲ್ಲಿ ನಾಗರಹಾವೊಂದು ಪತ್ತೆಯಾಗಿದೆ. ಇದನ್ನು ಕಂಡು ಪೈಲಟ್ ರುಡಾಲ್ಫ್ ಎರಾಸ್ಮಸ್ ಗಾಬರಿಗೊಂಡಿದ್ದಾರೆ. ಆದರೂ ಸಾವರಿಸಿಕೊಂಡು, ತಕ್ಷಣವೇ ವಿಮಾನವನ್ನು ಲ್ಯಾಂಡಿಂಗ್ ಮಾಡಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿಮಾನದಲ್ಲಿ ನಾಗರಹಾವು ಪತ್ತೆ ಆಗಿದ್ದು ಹೇಗೆ?: ಎಂದಿನಂತೆ ಪೈಲಟ್ ವಿಮಾನ ಹಾರಾಟ ಆರಂಭಿಸಿದ್ದಾರೆ. ಇನ್ನು ತಮ್ಮ ಸೀಟಿನ ಕೆಳಗೆ ಎಂದಿನಂತೆ ನೀರಿನ ಬಾಟಲಿ ಇಟ್ಟುಕೊಂಡಿದ್ದಾರೆ. ನೀರು ಕುಡಿಯಲು ಅಂತಾ ಕೆಳಗೆ ಕೈ ಹಾಕಿದಾಗ ತಣ್ಣನೆಯ ಅನುಭವವಾಗಿದೆ. ಇದು ನೀರಿನ ಬಾಟಲಿ ಅಲ್ಲ ಅನ್ನೋದು ಗೊತ್ತಾಗಿ ನೋಡಿದಾಗ ಅಲ್ಲಿ ನಾಗರ ಹಾವು ಇರುವುದು ಗೊತ್ತಾಗಿದೆ.
ಸೇಫಾಗಿ ವಿಮಾನ ಲ್ಯಾಂಡಿಂಗ್ ಮಾಡಿದ ಫೈಲಟ್: ವಿಮಾನದಲ್ಲಿ ಹಾವಿರುವುದು ಗೊತ್ತಾಗಿದ್ದು, ವಿಮಾನ ಭೂಮಿಯಿಂದ ಸುಮಾರು 11 ಸಾವಿರ ಅಡಿ ಎತ್ತರದಲ್ಲಿದ್ದಾಗ ಏಕಾಏಕಿ ಕಾಕ್‌ಪಿಟ್‌ನಲ್ಲಿ ಹಾವನ್ನು ಕಂಡ ಪೈಲಟ್ ಎರಾಸ್ಮಸ್ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ. ಆದರೆ ಅದನ್ನು ತೋರಿಸಿಕೊಳ್ಳದೇ, ಪ್ರಯಾಣಿಕರಿಗೂ ಗಾಬರಿ ಮಾಡಲು ಹೋಗಿಲ್ಲ. ಕೂಡಲೇ ಚಾಣಕ್ಷತೆ ಮೆರದ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿರುವ ಫೈಲಟ್: ಹೀಗೆ ಸಮಯಪ್ರಜ್ಞೆ ಮೆರೆದು ನೂರಾರು ಜನರ ಪ್ರಾಣವನ್ನು ಕಾಪಾಡಿದ ಫೈಲಟ್ ಎರಾಸ್ಮಸ್ ಅವರ ಕಾರ್ಯಕ್ಕೆ ಶಹಬ್ಬಾಸ್ಗಿರಿ ಕೂಡಾ ಸಿಕ್ಕಿದೆ. ಈ ಬಗ್ಗೆ ಏವಿಯೇಷನ್ ಸ್ಪೆಷಲಿಸ್ಟ್ ಮತ್ತು ಎಸ್‌ಎ ಮುಖ್ಯ ಏರ್ ಶೋ ನಿರೂಪಕ ಬ್ರಿಯಾನ್ ಎಮ್ಮೆನಿಸ್ ಅವರು ಎರಾಸ್ಮಸ್ ಅವರ ಸಮಯ ಪ್ರಜ್ಞೆಯನ್ನು ಕೊಂಡಾಡಿದರು. ವಾಯುಯಾನದಲ್ಲಿ ಅತ್ಯುತ್ತಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: 200 ಪ್ರಯಾಣಿಕರಿದ್ದ ಎತಿಹಾದ್ ವಿಮಾನ ತುರ್ತು ಭೂಸ್ಪರ್ಶ
ಭಯಾನಕವಾದ ಹವಾಮಾನದಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಎರಾಸ್ಮಸ್: 'ನಾಲ್ಕು ದಶಕಗಳಲ್ಲಿ ಇಂತಹ ಪ್ರಕರಣವನ್ನು ನಾನು ಕೇಳಿರಲಿಲ್ಲ. ಹವಾಮಾನವೂ ಭಯಾನಕವಾಗಿತ್ತು. ಪೈಲಟ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ವೇಳೆ ನಾಗರಹಾವು ಪೈಲಟ್‌ಗೆ ಕಚ್ಚಿದ್ದರೆ ಅವರು ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು ಎಂದು ಎಮ್ಮೆನಿಸ್ ಪೈಲಟ್ ಅವರನ್ನು ಹೊಗಳಿದ್ದಾರೆ.
ಘಟನೆ ಬಗ್ಗೆ ಪೈಲಟ್ ಹೇಳಿದ್ದೇನು?: ’’ನಾನು ಸಾಮಾನ್ಯವಾಗಿ ಪ್ರಯಾಣದ ವೇಳೆ ನೀರಿನ ಬಾಟಲಿಯನ್ನು ಸೀಟಿನ ಪಕ್ಕದಲ್ಲಿ ಇಟ್ಟುಕೊಂಡಿರುತ್ತೇನೆ. ಆದರೆ, ಈ ವೇಳೆ ನಾನು ಪ್ರಯಾಣಿಸುವಾಗ ಸೀಟಿನಲ್ಲಿ ಏನೋ ತಣ್ಣನೆಯ ಅನುಭವವಾಯಿತು. ಆಗ ನಾನು ಸೀಟಿನಲ್ಲಿ ನೀರು ಚೆಲ್ಲಿರಬಹುದು ಎಂದು ಭಾವಿಸಿದೆ. ಆದರೆ ನಾನು ನನ್ನ ಎಡಭಾಗಕ್ಕೆ ತಿರುಗಿ ನೋಡಿದಾಗ ನಾಗರಹಾವೊಂದು ನನ್ನ ಸೀಟಿನ ಕೆಳಗೆ ತಲೆ ಎತ್ತಿರುವುದು ಕಂಡು ಬಂತು. ಈ ವೇಳೆ ನಾನು ಆಸನವನ್ನು ಮುಂದಕ್ಕೆ ಎಳೆದುಕೊಂಡಾಗ ಹಾವು ನನ್ನ ಸೀಟಿನ ಕೆಳಗೆ ಸುರುಳಿಯಾಗಿರುವುದನ್ನು ನೋಡಿದೆ. ಈ ವೇಳೆ ಅದನ್ನು ಹಿಡಿಯಲು ಪ್ರಯತ್ನಿಸಿದೆನಾದರೂ ಅದು ವಿಮಾನದಲ್ಲಿ ಕಣ್ಮರೆಯಾಯಿತು. ಈ ವೇಳೆ ಅದನ್ನು ಹಿಡಿಯಲು ಇಂಜಿನಿಯರ್‌ಗಳು ವಿಮಾನದ ಭಾಗಗಳನ್ನು ಹೊರತೆಗೆದರು. ಆದರೆ ಹಾವು ಸಿಗದಿದ್ದರಿಂದ ರಾತ್ರಿಯ ಸಮಯ ಹೊರಬರಲಿದೆಯೇ ಎಂದು ತಿಳಿಯಲು ಜೋಳದ ಆಹಾರವನ್ನು ಉದುರಿಸಿದೆವು. ಆದರೆ ಅದಾಗಲೇ ಹಾವು ತಪ್ಪಿಸಿಕೊಂಡಿತು‘‘ ಎಂದು ಪೈಲಟ್ ಎರಾಸ್ಮಸ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಿಂದ ಹೊರಟಿದ್ದ ವಿಮಾನ ಹೈದರಾಬಾದ್ನಲ್ಲಿ ತುರ್ತು ಭೂ ಸ್ಪರ್ಶ!