ಆಗ್ರಾ(ಉತ್ತರ ಪ್ರದೇಶ): ಹಾವಿನ ದ್ವೇಷ 12 ವರುಷ ಅನ್ನೋ ಮಾತಿದೆ. ಇಲ್ಲೋರ್ವ ಯುವಕನಿಗೆ ಹಾವೊಂದು ಹುಡುಕಿಕೊಂಡು ಬಂದು ಮತ್ತೆ ಮತ್ತೆ ಕಚ್ಚುತ್ತಿದೆ. ಯಾವ ಕಾರಣಕ್ಕಾಗಿ ದ್ವೇಷ ಸಾಧಿಸುತ್ತಿದೆ ಎಂಬುದು ಮಾತ್ರ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಆಗ್ರಾ ಜಿಲ್ಲೆಯಲ್ಲಿರುವ 20 ವರ್ಷದ ಯುವಕ ರಜತ್ ಚಹರ್ಗೆ ಕಳೆದ 10 ದಿನಗಳ ಅಂತರದಲ್ಲಿ ಐದಕ್ಕೂ ಹೆಚ್ಚು ಸಲ ಕಚ್ಚಿ ಗಾಯಗೊಳಿಸಿದೆ. ಅದೃಷ್ಟವಶಾತ್ ಸಕಾಲದಲ್ಲಿ ಚಿಕಿತ್ಸೆ ಪಡೆದು ಆತ ಬದುಕುಳಿದಿದ್ದಾನೆ.
ರಜತ್ ಉತ್ತರ ಪ್ರದೇಶದ ಮಾಲ್ಪುರದ ಮಂಕೆಡಾ ಎಂಬಲ್ಲಿ ವಾಸವಾಗಿದ್ದಾನೆ. ಪದವಿ ವ್ಯಾಸಂಗ ಮಾಡುತ್ತಿದ್ದು ಮೊದಲ ಬಾರಿಗೆ ಸೆಪ್ಟೆಂಬರ್ 6 ರಂದು ರಾತ್ರಿ 10 ಗಂಟೆಗೆ ಮನೆಯ ಹೊರಗಡೆ ಹಾವು ಕಚ್ಚಿದೆ. ತಕ್ಷಣವೇ ವೈದ್ಯಕೀಯ ಕಾಲೇಜ್ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಸೆಪ್ಟೆಂಬರ್ 8ರಂದು ಸಂಜೆಯ ವೇಳೆ ಮನೆ ಹೊರಗಡೆಯ ಶೌಚಾಲಯಕ್ಕೆ ಬಂದಾಗ ಮತ್ತೊಮ್ಮೆ ಹಾವು ಕಚ್ಚಿದೆ. ಈ ಸಂದರ್ಭಲ್ಲೂ ತಕ್ಷಣ ಚಿಕಿತ್ಸೆ ಕೊಡಿಸಲಾಗಿದೆ. ಇದಾದ ಬಳಿಕ ಸೆಪ್ಟೆಂಬರ್ 11,13 ಹಾಗೂ 14ರಂದು ಕ್ರಮವಾಗಿ ಹಾವು ಕಚ್ಚಿದೆ. ಯುವಕನಿಗೆ ಪದೇ ಪದೇ ಹಾವು ಕಚ್ಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಸುದ್ದಿ ಎಲ್ಲೆಡೆ ಹರಡಿ ಆತನನ್ನು ನೋಡಲು ಜನ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪೊಲೀಸ್ ಠಾಣೆಗೆ ಹಾವುಗಳ ರಕ್ಷಣೆ: ಇಡುಕ್ಕಿಯಲ್ಲೊಂದು ಅಚ್ಚರಿ !
ಮಗನಿಗೆ ಹಾವು ಕಚ್ಚುತ್ತಿರುವ ಕಾರಣ ತಂದೆ ರಾಮ್ ಕುಮಾರ್ ಹಾಗೂ ಇತರೆ ಸದಸ್ಯರು ಆತಂಕಕ್ಕೊಳಗಾಗಿದ್ದು, ಹೆಚ್ಚಿನ ನಿಗಾ ಇಟ್ಟಿದ್ದಾರೆ. ಯಾವ ಕಾರಣಕ್ಕಾಗಿ ಈ ರೀತಿ ಹಾವು ಹಗೆ ಸಾಧಿಸುತ್ತಿದೆ ಎಂಬುದೇ ಕುಟುಂಬವನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ!.