ನವದೆಹಲಿ: ರೈಲಿನಲ್ಲಿ ಧೂಮಪಾನ ಪ್ರಕರಣಗಳಿಂದ ಗಂಭೀರ ಪರಿಣಾಮ ಸಂಭವಿಸುತ್ತಿವೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದ ಪ್ರಯಾಣಿಕರಿಗೆ ಬಂಧನ ಸೇರಿದಂತೆ ಕಠಿಣ ದಂಡ ವಿಧಿಸಲು ಭಾರತೀಯ ರೈಲ್ವೆ ಮುಂದಾಗಲಿದ್ದು, ರೈಲಿನಲ್ಲಿ ಧೂಮಪಾನ ಮಾಡಿದ್ರೆ ಭಾರಿ ಪ್ರಮಾಣದ ವೆಚ್ಚ ಭರಿಸಬೇಕಾಗಬಹುದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಶತಾಬ್ದಿ ಎಕ್ಸ್‌ಪ್ರೆಸ್ ಕೋಚ್‌ನಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿದ್ದರ ಬಗ್ಗೆ ತನಿಖೆ ನಡೆಸಿದ ಬಳಿಕ, ಧೂಮಪಾನಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈ ಘಟನೆಯ ಹಿಂದಿನ ಕಾರಣ ಸಿಗರೇಟ್ ಸ್ಟಬ್‌ಗಳು ಎನ್ನಲಾಗುತ್ತಿದೆ.
ಡಸ್ಟ್‌ಬಿನ್‌ನಲ್ಲಿ ಎಸೆದ ಸಿಗರೇಟ್ ಮತ್ತು ಬೀಡಿ ಸ್ಟಬ್‌ಗಳು ಟಿಶ್ಯೂ ಪೇಪರ್ ನೆರವಿನಿಂದ ಬೆಂಕಿ ಕಾಣಿಸಿಕೊಂಡಿದ್ದು, ದೆಹಲಿ-ಡೆಹ್ರಾಡೂನ್ ಶತಾಬ್ದಿ ಸ್ಪೆಷಲ್ ರೈಲಿನ ಎಸ್ 5 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತನಿಖೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವ್ಯಾಪಾರದ ಸುಲಲತೆಯಲ್ಲಿ ಗರಿಷ್ಠ ಅಂಕ ಪಡೆದ 20 ರಾಜ್ಯಗಳಿಗೆ ಕೇಂದ್ರದಿಂದ ಬಿಗ್ ಗಿಫ್ಟ್
ವೇಗವಾಗಿ ಚಲಿಸುವ ಶತಾಬ್ದಿ ರೈಲು, ಬೆಂಕಿಯ ಜ್ವಾಲೆ ಮತ್ತಷ್ಟು ಹೆಚ್ಚಾಗಲು ಕಾರಣ ಆಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾರ್ಚ್ 13ರಂದು ಉತ್ತರಾಖಂಡದ ರೈವಾಲಾ ಬಳಿ ಈ ಬೆಂಕಿ ಅವಘಡ ಸಂಭವಿಸಿತ್ತು.
ಪ್ರಸ್ತುತ, ರೈಲಿನಲ್ಲಿ ಸಿಗರೇಟ್ ಅಥವಾ ಬೀಡಿ ಧೂಮಪಾನ ಮಾಡುವುದು ರೈಲ್ವೆ ಕಾಯ್ದೆಯ ಸೆಕ್ಷನ್ 167ರ ಅಡಿ ಅಪರಾಧವಾಗಿದೆ. ಈ ಅಪರಾಧಕ್ಕೆ ವಿಧಿಸಲಾಗುವ ದಂಡದ ಮೊತ್ತ ಕೇವಲ 100 ರೂ.ಯಾಗಿದೆ. ಧೂಮಪಾನದ ವಿರುದ್ಧ ಇದು ತೀವ್ರ ಪ್ರತಿರೋಧಕವಾಗಿ ಕಾರ್ಯನಿರ್ವಹಿಸುವುದಿಲ್ಲ.
ಇತ್ತೀಚೆಗೆ ರೈಲ್ವೆ ಮಂಡಳಿ ಸದಸ್ಯರು ಮತ್ತು ವಲಯಗಳ ವ್ಯವಸ್ಥಾಪಕರ ಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು, ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆಲವು ಜನರ ತಪ್ಪಿನಿಂದಾಗಿ ಇತರ ಪ್ರಯಾಣಿಕರು ತೊಂದರೆ ಅನುಭವಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.