ನವದೆಹಲಿ: ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ಪಡೆಯುವ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಲು ಸರ್ಕಾರಿ ಸಮಿತಿಯಾದ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರತಿ ನಾಗರಿಕರು ಲಸಿಕೆಯ ಎರಡು ಡೋಸ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸದ್ಯ ಕೋವಿಶೀಲ್ಡ್ನ 2ನೇ ಡೋಸ್ ಪಡೆಯಲು 28 ರಿಂದ 56 ದಿನಗಳ ಅಂತರವಿದೆ. ಆದರೆ ಈ ಅಂತರ ಇದೀಗ 12 ರಿಂದ 16 ವಾರಗಳಿಗೆ ಅಂದರೆ ಮೂರರಿಂದ ನಾಲ್ಕು ತಿಂಗಳಿಗೆ ಹೆಚ್ಚಿಸಲಾಗಿದೆ. ಕೋವಾಕ್ಸಿನ್ನ ಎರಡನೇ ಡೋಸ್ ಪಡೆಯಲು 28 ರಿಂದ 42 ದಿನಗಳ ಅಂತರವಿದ್ದು, ಈ ಬಗ್ಗೆ ಸಮಿತಿಯು ಯಾವುದೇ ಬದಲಾವಣೆಯನ್ನು ಸೂಚಿಸಿಲ್ಲ.
ಗರ್ಭಿಣಿಯರೂ ಲಸಿಕೆ ಹಾಕಿಸಿಕೊಳ್ಳಬಹುದು
ಗರ್ಭಿಣಿಯರು ಕೂಡ ಕೋವಿಡ್ 19 ಲಸಿಕೆಯನ್ನು ಹಾಕಿಸಿಕೊಳ್ಳಬಹುದು. ಹಾಗೆಯೇ ಮಕ್ಕಳಿಗೆ ಹಾಲುಣಿಸುವ ಬಾಣಂತಿಯರು ಹೆರಿಗೆಯ ನಂತರ ಯಾವುದೇ ಸಮಯದಲ್ಲಿ ವ್ಯಾಕ್ಸಿನ್ ಪಡೆಯಬಹುದು ಎಂದು ಸಹ ಸಮಿತಿ ತಿಳಿಸಿದೆ.
ಸೋಂಕಿನಿಂದ ಗುಣಮುಖರಾದವರು ಯಾವಾಗ ವ್ಯಾಕ್ಸಿನ್ ಪಡೆಯಬೇಕು?
ಪ್ರಸ್ತುತ ಇರುವ ಪ್ರೋಟೋಕಾಲ್ ಪ್ರಕಾರ, ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರು ನಾಲ್ಕರಿಂದ ಎಂಟು ವಾರಗಳ ಒಳಗೆ ಲಸಿಕೆ ತೆಗೆದುಕೊಳ್ಳಬೇಕು. ಆದರೆ ಇದೀಗ ಸಮಿತಿಯು ಈ ಅವಧಿಯನ್ನು ಕೂಡ ಹೆಚ್ಚಿಸಿದ್ದು, ಆರು ತಿಂಗಳೊಳಗೆ ವ್ಯಾಕ್ಸಿನ್ ಪಡೆಯಲು ಸೂಚಿಸಿದೆ.
ದೇಶದಲ್ಲಿ ಕೋವಿಡ್ ಲಸಿಕೆಯ ಅಭಾವವಿರುವುದರಿಂದ ಹೀಗೆ ಸರ್ಕಾರವು ಶಿಫಾರಸು ಮಾಡಲಾಗಿದೆಯೇ? ಮೋದಿ ಸರ್ಕಾರದಲ್ಲಿ ಸ್ವಲ್ಪವಾದರೂ ಪಾರದರ್ಶಕತೆ ಕಾಣಬಹುದೇ? ಎಂದು ಕಾಂಗ್ರೆಸ್ ಮುಖಂಡ, ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.