ಸಮಕಾಲೀನ ಸಮಯದಲ್ಲಿ ಯಾವುದೇ ಕೆಲಸವನ್ನು ವಿಶಿಷ್ಟ ಹಾಗೂ ಕ್ರಿಯಾಶೀಲ ರೀತಿಯಲ್ಲಿ ಮಾಡಿ ಮುಗಿಸುವವರು ಮಾತ್ರ ಜೀವನದಲ್ಲಿ ಏಳಿಗೆ ಸಾಧಿಸುತ್ತಾರೆ. ಇಂಥ ಪ್ರತಿಭೆ ಇರುವ ಇಂದಿನ ಯುವ ಪೀಳಿಗೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ರಾಷ್ಟ್ರೀಯ ಅಗತ್ಯ ಎಂದು ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದರು. ಆತ್ಮನಿರ್ಭರ ಭಾರತಕ್ಕೆ ಇಂಥ ಕ್ರಮದ ಅಗತ್ಯವೂ ಆಗಿದೆ ಎಂದು ಅವರು ಹೇಳಿದ್ದರು.
ಭಾರತಕ್ಕೆ ಹೋಲಿಸಿದರೆ ರಾಷ್ಟ್ರದ ಮುಖ್ಯ ವಾಹಿನಿಯ ದುಡಿಯುವ ವರ್ಗದವರಲ್ಲಿ ವೃತ್ತಿಪರ ಕೌಶಲ ಬೆಳೆಸುವಲ್ಲಿ ದಕ್ಷಿಣ ಕೊರಿಯಾ, ಜಪಾನ್, ಜರ್ಮನಿ, ಯುಕೆ, ಅಮೆರಿಕ, ಚೀನಾ ಮುಂತಾದ ದೇಶಗಳು ಬಹಳಷ್ಟು ಮುಂದಿವೆ. ಆದರೆ ಭಾರತದಲ್ಲಿ ಕ್ಲಾಸ್ ರೂಂ ಶಿಕ್ಷಣಕ್ಕೂ ಉದ್ಯಮಗಳಲ್ಲಿ ಬೇಕಾಗುವ ಕೌಶಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ವಿಷಯದಲ್ಲಿ ನಾವಿನ್ನೂ ಅನೇಕ ವರ್ಷ ಹಿಂದೆ ಇದ್ದೇವೆ. ಶೇ 60ಕ್ಕೂ ಹೆಚ್ಚು ಐಟಿ, ಎಂಜಿನಿಯರಿಂಗ್ ಮತ್ತು ಸಂಬಂಧಿತ ಕ್ಷೇತ್ರಗಳು ಕುಶಲ ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿವೆ.
ದೇಶದಲ್ಲಿ 10 ಕೋಟಿಗೂ ಹೆಚ್ಚು ನೌಕರಿಯ ಅವಕಾಶಗಳಿದ್ದರೂ ಈ ನೌಕರಿಗಳಿಗೆ ಸೂಕ್ತವಾದ ಕೌಶಲ್ಯ ಹೊಂದಿದ ವೃತ್ತಿಪರರ ಕೊರತೆ ಬಹಳಷ್ಟಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೇಳಿದೆ. ಒಂದು ವೇಳೆ ಯುವಜನತೆ ತಮ್ಮ ವೃತ್ತಿ ಹಾಗೂ ಜೀವನ ಎರಡರಲ್ಲೂ ಕೌಶಲ ಬೆಳೆಸಿಕೊಂಡರೆ ಬಡತನ ನಿವಾರಣೆ ಹಾಗೂ ಸಂಪತ್ತು ಸೃಷ್ಟಿಗೆ ಬಹುದೊಡ್ಡ ದಾರಿಯಾಗಲಿದೆ. ಕೇಂದ್ರದ ಸುಮಾರು 20 ಸಚಿವಾಲಯಗಳ ವತಿಯಿಂದ ಕೌಶಲ ವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆಯಾದರೂ, ಇವು ತುಂಬಾ ಸೀಮಿತ.
ಬೃಹತ್ ಪ್ರಮಾಣದಲ್ಲಿ ನೌಕರಿಗಳನ್ನು ಸೃಜಿಸಬಲ್ಲ 30 ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ 1 ಕೋಟಿ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. 7ನೇ ತರಗತಿ ಅಥವಾ ಅದಕ್ಕೂ ಹೆಚ್ಚು ಶಾಲೆ ಕಲಿತವರಿಗೆ ಎಐಸಿಟಿಇ ಮುಂದಾಳತ್ವದಲ್ಲಿ ಈ ತರಬೇತಿಗಳನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತವನ್ನು ಜಾಗತಿಕ ಡಿಜಿಟಲ್ ಕೌಶಲ್ಯದ ರಾಜಧಾನಿಯನ್ನಾಗಿಸಬೇಕಾದರೆ ಭಾರತದಾದ್ಯಂತದ ವಿದ್ಯಾರ್ಥಿಗಳ ಕೌಶಲ ಮಟ್ಟವನ್ನು ಬೆಳೆಸಬೇಕಿದೆ. ಇದಕ್ಕಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಗುರಿ ಸಾಧಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಹಾಗೂ ಇದಕ್ಕಾಗಿ ದೊಡ್ಡ ಮಟ್ಟದ ಅನುದಾನವನ್ನು ಸಹ ಮೀಸಲಿಡಬೇಕಿದೆ.
ಜ್ಞಾನಾಧಾರಿತ ಸಮಾಜದಲ್ಲಿ ಶೇ 80 ರಷ್ಟು ಎಂಜಿನಿಯರಿಂಗ್ ಪದವೀಧರರು ನವೀನ ರೀತಿಯ ಉದ್ಯೋಗಗಳು ಅಥವಾ ಸೇವೆಗಳ ಕ್ಷೇತ್ರದಲ್ಲಿ ಕೆಲಸ ಮಾಡಲು ನೈಪುಣ್ಯತೆ ಹೊಂದಿರಬೇಕಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದಿದೆ. ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗ ಮಾರುಕಟ್ಟೆಯಲ್ಲಿ ಈಗ ಚಾಲ್ತಿಯಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್, ಡೇಟಾ ಸೈನ್ಸ್, ವೈರ್ಲೆಸ್ ಟೆಕ್ನಾಲಜಿ ಮುಂತಾದುವುಗಳಿಗೆ ಬೇಕಾದ ತರಬೇತಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಇನ್ನು ಎಂಬಿಎ, ಎಂಸಿಎ ಹಾಗೂ ಇನ್ನಿತರ ಕೋರ್ಸ್ ಕಲಿಯುವವರ ಪಾಡು ಸಹ ಅಷ್ಟಕ್ಕಷ್ಟೇ.
ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳು ಶೈಕ್ಷಣಿಕ ಡಿಗ್ರಿಗಳನ್ನು ಪಡೆಯುತ್ತಿದ್ದಾರೆ ಎಂಬುದು ಸತ್ಯವಾದರೂ, ಈ ವಿದ್ಯಾರ್ಥಿಗಳು ಅಗತ್ಯ ಪ್ರಾಯೋಗಿಕ ಜ್ಞಾನ ಹೊಂದಿಲ್ಲ. ಹೀಗಾಗಿ ಈ ಡಿಗ್ರಿಗಳು ಯುವಪಡೆಗೆ ಉತ್ತಮ ಭವಿಷ್ಯ ನೀಡಬಲ್ಲ ಉದ್ಯೋಗ ನೀಡಲು ವಿಫಲವಾಗುತ್ತಿವೆ. ಸಮಸ್ಯೆ ಪರಿಹಾರದ ಕ್ಷೇತ್ರದಲ್ಲಿ ಬೇಕಾದ ನೈಪುಣ್ಯತೆಯನ್ನು ಕಲಿಯುವಲ್ಲಿ ಬಹತೇಕ ಯುವಜನತೆ ವಿಫಲರಾಗುತ್ತಿದ್ದಾರೆ. ಈ ಯುವಕರು ತಮಗೆ ಸಿಕ್ಕ ಯಾವುದೋ ಒಂದು ಕೆಲಸ ಮಾಡುತ್ತಾರೆ ಹಾಗೂ ಕಡಿಮೆ ಸಂಬಳದಲ್ಲಿ ಬದುಕುವಂತಾಗುತ್ತದೆ. ಭವ್ಯ ಭವಿಷ್ಯದ ಕಡೆಗೆ ನೋಡುತ್ತಿರುವ ದೇಶದ ಯುವಜನತೆ ಇಂಥದೊಂದು ದಿಕ್ಕುತಪ್ಪಿದ ಸ್ಥಿತಿಯಲ್ಲಿ ಇರುವುದು ಸರಿಯಲ್ಲ.
ಶಾಲಾ ಅವಧಿಯಿಂದಲೇ ವೃತ್ತಿಪರ ಶಿಕ್ಷಣ ನೀಡದಿದ್ದರೆ ಹಾಗೂ ಕೈಗಾರಿಕೆ ಮತ್ತು ಶಿಕ್ಷಣದ ಮಧ್ಯೆ ಬೆಸುಗೆ ಬೆಸೆಯದಿದ್ದರೆ ದೀರ್ಘಾವಧಿಯಲ್ಲಿ ದೇಶಕ್ಕೆ ಇನ್ನಷ್ಟು ಹಾನಿಯಾಗಬಹುದು. ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಕಾರ್ಯಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಿ ಅಲ್ಲಿ ಸಮಸ್ಯೆಗಳಿದ್ದರೆ ಪರಿಹರಿಸಬೇಕು. ಆಡಳಿತದಲ್ಲಿರುವವರು ಇಂಥದ್ದೊಂದು ಕ್ರಮಕ್ಕೆ ಮುಂದಾದರೆ ದೇಶವು ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಯತ್ತ ಸಾಗಬಹುದು.