ಕಾನ್ಪುರ(ಉತ್ತರ ಪ್ರದೇಶ): ಕಾನ್ಪುರ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಉಂಟಾದ ಪ್ರಮಾದದಿಂದಾಗಿ 6 ಮಂದಿ ದೃಷ್ಟಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕಾನ್ಪುರ ಮಹಾನಗರದ ಬರ್ರಾ ಬೈಪಾಸ್‌ನಲ್ಲಿರುವ ಆರಾಧ್ಯ ನರ್ಸಿಂಗ್ ಹೋಂನ ನೇತ್ರ ಶಿಬಿರದಲ್ಲಿ ಭಾಗವಹಿಸಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ಈ ರೋಗಿಗಳು ದೃಷ್ಟಿ ಕಳೆದುಕೊಂಡಿದ್ದಾರೆ. ಈ ಕುರಿತು ಕಳೆದ ಹಲವು ದಿನಗಳಿಂದ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ನೀಡಿದರೂ ಕೂಡ ರೋಗಿಗಳಿಗೆ ಯಾರೂ ಸ್ಪಂದಿಸಿಲ್ಲ. ಇದರಿಂದ ನೊಂದ ವೃದ್ಧರು ಸಿಎಂಒಗೆ (ಮುಖ್ಯ ವೈದ್ಯಕೀಯ ಅಧಿಕಾರಿ) ದೂರು ನೀಡಿದ್ದಾರೆ. ತಕ್ಷಣವೇ ಮುಖ್ಯ ವೈದ್ಯಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಕಣ್ಣುಗಳಲ್ಲಿ ನೋವು ಪ್ರಾರಂಭವಾಯಿತು. ನಂತರ ನಿಧಾನವಾಗಿ ಕಣ್ಣುಗಳಿಂದ ನೀರು ಹರಿಯತೊಡಗಿತು. ಬಳಿಕ ದೃಷ್ಟಿ ಹೋಯಿತು. ಈ ಕುರಿತು ಆಸ್ಪತ್ರೆಗೆ ಹೋಗಿ ದೂರು ನೀಡಿದರೂ ಯಾರೂ ನಮ್ಮ ಮಾತಿಗೆ ಕಿವಿಗೊಡಲಿಲ್ಲ. ಸಿಎಂಒಗೆ ಮಾಹಿತಿ ನೀಡಲಾಗಿದೆ ಎಂದು ದೃಷ್ಟಿ ಕಳೆದುಕೊಂಡ ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ 7 ಜನ ಸಾವು, ದೃಷ್ಟಿ ಕಳೆದುಕೊಂಡ 25 ಮಂದಿ.. ಮುಗಿಲು ಮುಟ್ಟಿದ ಆಕ್ರಂದನ!
ಆರಾಧ್ಯ ನರ್ಸಿಂಗ್ ಹೋಂ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ತನಿಖಾ ಸಮಿತಿ ರಚಿಸಿ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ. ಕಾನ್ಪುರ ವೈದ್ಯಕೀಯ ಕಾಲೇಜು ಸೇರಿದಂತೆ ನಗರದ ಇಬ್ಬರು ದೊಡ್ಡ ನೇತ್ರ ಶಸ್ತ್ರಚಿಕಿತ್ಸಕರನ್ನು ವಿಚಾರಣಾ ಸಮಿತಿಯಲ್ಲಿ ಇರಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.