ನವದೆಹಲಿ: ಸ್ಥಳೀಯ ರಕ್ಷಣಾ ಉದ್ಯಮಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಭಾರತವು ಆರು ಹೊಸ ವಿಚಕ್ಷಣಾ (ವಾಯುಗಾಮಿ ಆರಂಭಿಕ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ) ವಿಮಾನಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಲಿದೆ.
ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ವಾಯುಪಡೆಯ ಕಣ್ಗಾವಲು ಸಾಮರ್ಥ್ಯಗಳನ್ನು ಇನ್ನಷ್ಟು ಸುಧಾರಿಸಲು ಭಾರತ ಮುಂದಾಗಿದೆ.
ಚರ್ಚೆಯ ಪ್ರಕಾರ 10,500 ಕೋಟಿ ರೂಪಾಯಿಗಳ ಯೊಜನೆಯಡಿ ಡಿಆರ್‌ಡಿಒ, ಎಇಯು ಮತ್ತು ಸಿ ಬ್ಲಾಕ್ 2 ವಿಮಾನಗಳನ್ನು ಅಭಿವೃದ್ಧಿಪಡಿಸಲಿದೆ. ಈ ಆರು ವಿಮಾನಗಳನ್ನು ಏರ್ ಇಂಡಿಯಾದಿಂದ ಸ್ವಾಧೀನಪಡಿಸಿಕೊಂಡು ಮಾರ್ಪಡಿಸಲಾಗುತ್ತದೆ. ಇವುಗಳಲ್ಲಿ 360 ಡಿಗ್ರಿ ಸಾಮರ್ಥ್ಯದ ಅತ್ಯಾಧುನಿಕ ರಾಡಾರ್ ಇರಲಿದ್ದು, ಯಾವುದೇ ರೀತಿಯ ಅಪಾಯಗಳನ್ನು ಮೊದಲೇ ಗ್ರಹಿಸಿ ಮಾಹಿತಿ ರವಾನಿಸುತ್ತದೆ ಎನ್ನಲಾಗಿದೆ.
ಹೊಸ ಯೊಜನೆಯಿಂದಾಗಿ, ಈ ಹಿಂದೆ ಉದ್ದೇಶಿಸಲಾಗಿದ್ದ ಯೂರೋಪಿಯನ್ ಮೂಲದ ಸಂಸ್ಥೆಯಿಂದ 6 ಏರ್ ಬಸ್ 330 ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಗಳ ಪ್ರಕಾರ, ಆರು ಹೊಸ ವಿಮಾನಗಳಿಗೆ ರಾಡಾರ್ ಅಳವಡಿಸಲು, ವಿಮಾನಗಳನ್ನು ಮಾರ್ಪಾಡು ಮಾಡಲು ಯುರೋಪಿಗೆ ಕಳುಹಿಸಲಾಗುವುದು. ರಕ್ಷಣಾ ವಲಯದಲ್ಲಿ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಉತ್ತೇಜನಕ್ಕಾಗಿ ಈ ಯೋಜನೆ ಸಿದ್ದಪಡಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.