ಶ್ರೀನಗರ(ಜಮ್ಮು-ಕಾಶ್ಮೀರ): ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಗಂಭೀರ ಆರೋಪದಡಿ ಜಮ್ಮು-ಕಾಶ್ಮೀರದ ಆರು ಮಂದಿ ಸರ್ಕಾರಿ ನೌಕರರನ್ನು ವಜಾಗೊಳಿಸಲಾಗಿದೆ. ದೇಶವಿರೋಧಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಲೆಪ್ಟಿನೆಂಟ್ ಗವರ್ನರ್ ತಿಳಿಸಿದ್ದಾರೆ.
ಅಬ್ದುಲ್ ಹಮೀದ್ ವಾನಿ, ಜಾಫರ್ ಹುಸೇನ್ ಭಟ್, ಮೊಹಮ್ಮದ್ ರೈಫ್ ಭಟ್, ಲಿಯಾಖತ್ ಅಲಿ, ತಾರಿಖ್ ಮೆಹಮೊದ್ ಹಾಗೂ ಸೊವಾಖತ್ ಅಹ್ಮದ್ ಖಾನ್ ಸರ್ಕಾರಿ ಸೇವೆಯಿಂದ ವಜಾಗೊಂಡವರು. ಇದರಲ್ಲಿ ಇಬ್ಬರು ಪೊಲೀಸ್ ಕಾನ್ಸ್ಸ್ಟೇಬಲ್, ಇಬ್ಬರು ಶಿಕ್ಷಕರು, ಅರಣ್ಯ ಇಲಾಖೆ ಅಧಿಕಾರಿ ಹಾಗೂ ರಸ್ತೆ ಮತ್ತು ಕಟ್ಟಡ ಇಲಾಖೆ ನೌಕರರು ಎಂದು ತಿಳಿದು ಬಂದಿದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಕ್ರಮ ಕೈಗೊಂಡಿದ್ದು, ನೌಕರರ ವಜಾಕ್ಕೆ ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಭಾರತೀಯ ಸಂವಿಧಾನದ ಆರ್ಟಿಕಲ್ 311(2)(C) ಅಡಿಯಲ್ಲಿ ಈ ನೌಕರರನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರದ 11 ಸರ್ಕಾರಿ ನೌಕರರ ವಜಾ
ಕಳೆದ ಜೂನ್ ತಿಂಗಳಲ್ಲೂ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಜಮ್ಮು-ಕಾಶ್ಮೀರದ 11 ಮಂದಿ ಸರ್ಕಾರಿ ನೌಕರರ ವಜಾಗೊಳಿಸಿ ಆದೇಶ ಹೊರಡಿಸಲಾಗಿತ್ತು.