ಚಂಡೀಗಡ( ಹರಿಯಾಣ): ರೈತ ಚಳವಳಿಯ ಪ್ರಭಾವದಿಂದಾಗಿ, ಹರಿಯಾಣದಲ್ಲಿ ಪ್ರತಿಪಕ್ಷಗಳು ಸರ್ಕಾರವು ಅಲ್ಪಸಂಖ್ಯಾತರಲ್ಲಿದೆ ಎಂದು ಹೇಳಿಕೊಳ್ಳುತ್ತಿದೆ. ರೈತ ಚಳವಳಿಯಿಂದಾಗಿ ಇಬ್ಬರು ಸ್ವತಂತ್ರ ಶಾಸಕರು ಸಹ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗ ಕಾಂಗ್ರೆಸ್ ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳುವ ಸಾಧ್ಯತೆಯಿದೆ. ಬಜೆಟ್ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷದ ನಾಯಕ ಭೂಪೇಂದ್ರ ಸಿಂಗ್ ಹೂಡಾ ಸೇರಿದಂತೆ 25 ಶಾಸಕರ ಸಹಿಯೊಂದಿಗೆ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಲಾಯಿತು. ಇದನ್ನು ವಿಧಾನಸಭಾ ಸ್ಪೀಕರ್ ಜ್ಞಾನ ಚಂದ್ ಗುಪ್ತಾ ಅನುಮೋದಿಸಿದರು. ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಜೆಪಿ ವಿಪ್ ಜಾರಿಗೊಳಿಸಿವೆ.
ಈ ಅವಿಶ್ವಾಸ ನಿರ್ಣಯದ ಕುರಿತು ಮಾರ್ಚ್ 10 ರಂದು ಅಂದರೆ ಇಂದು ಚರ್ಚೆ ನಡೆಯಲಿದೆ. ಪರಿಸ್ಥಿತಿ ಎದುರಾದರೆ ಅದೇ ದಿನ ಮತದಾನ ನಡೆಯಬಹುದು. ಅವಿಶ್ವಾಸ ನಿರ್ಣಯವನ್ನು ನೋಡಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಜೆಪಿ ಮಾರ್ಚ್ 10 ಕ್ಕೆ ಆಯಾ ಶಾಸಕರಿಗೆ ವಿಪ್ ನೀಡಿದೆ. ವಿಪ್ ನೀಡಿದ ನಂತರ ಪಕ್ಷದ ಶಾಸಕರಿಗೆ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.
ಅದೇ ಸಮಯದಲ್ಲಿ, ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವ ಶಾಸಕರು ಸರ್ಕಾರದ ವಿರುದ್ಧ ಹೋಗುವುದಾಗಿ ಘೋಷಿಸಿದ್ದು, ವಿಧಾನಸಭೆಯಲ್ಲಿ ರೈತರಿಗೆ ಬೆಂಬಲ ನೀಡಿದ್ದಾರೆ. ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಚಾರ್ಖಿ ದಾದ್ರಿಯ ಸ್ವತಂತ್ರ ಶಾಸಕ ಸೋಂಬೀರ್ ಸಾಂಗ್ವಾನ್ ಹೇಳಿದ್ದಾರೆ. ಆದ್ದರಿಂದ, ಸದನದಲ್ಲಿ ಸರ್ಕಾರದ ವಿರುದ್ಧ ಯಾವುದೇ ಪ್ರಸ್ತಾಪಗಳು ಬಂದರೂ ಅದನ್ನು ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡನೆಗೆ ಒಂದು ದಿನ ಮೊದಲು ಯುನೈಟೆಡ್ ಕಿಸಾನ್ ಮೋರ್ಚಾ ಅವರು ರಾಜ್ಯದ ಎಲ್ಲ ಶಾಸಕರಿಗೆ ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ ಮತ್ತು ಶಾಸಕರ ಮನೆಗೆ ಜ್ಞಾಪಕ ಪತ್ರವನ್ನೂ ಸಲ್ಲಿಸಿದ್ದಾರೆ. ಕಾಂಗ್ರೆಸ್ನಿಂದ ರೈತರವರೆಗೆ ಎಲ್ಲರೂ ಸರ್ಕಾರವನ್ನು ಸುತ್ತುವರಿಯಲು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಿಮವಾಗಿ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಬರಲಿದೆ. ಆದರೆ ಈಗಿನ ಬಿಜೆಪಿಗೆ ನಿಜವಾಗಿಯೂ ಬೆದರಿಕೆ ಇದೆಯೇ ಎಂದು ತಿಳಿಯುವುದು ಸಹ ಮುಖ್ಯವಾಗಿದೆ.
ಹರಿಯಾಣ ವಿಧಾನಸಭೆಯ ಪ್ರಸ್ತುತ ಸ್ಥಿತಿ: ಹರಿಯಾಣದಲ್ಲಿ 90 ಅಸೆಂಬ್ಲಿ ಸ್ಥಾನಗಳಿವೆ. ಬಹುಮತ ಪಡೆಯಲು ಯಾವುದೇ ಪಕ್ಷ ಕನಿಷ್ಠ 46 ಸ್ಥಾನಗಳನ್ನು ವಶಪಡಿಸಿಕೊಳ್ಳಬೇಕು. 2019ರಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಸರಳ ಬಹುಮತಕ್ಕೆ ಆರು ಸ್ಥಾನಗಳ ಕೊರತೆ ಎದುರಿಸಿತ್ತು. ಹೀಗಾಗಿ 10 ಜೆಜೆಪಿ ಶಾಸಕರು ಬಿಜೆಪಿಯನ್ನು ಬೆಂಬಲಿಸಿದೆ. ಕಾಂಗ್ರೆಸ್ 31 ಸ್ಥಾನಗಳನ್ನು ಮತ್ತು ಐಎನ್‌ಎಲ್‌ಡಿಗೆ 1 ಸ್ಥಾನಗಳನ್ನು ಪಡೆದರೆ, ಸ್ವತಂತ್ರ ಶಾಸಕರು 8 ಸ್ಥಾನಗಳನ್ನು ಗೆದ್ದಿದ್ದಾರೆ. ಜೆಜೆಪಿ ಮತ್ತು ಕೆಲವು ಸ್ವತಂತ್ರರು ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ. ಈಗ ಇಬ್ಬರು ಪಕ್ಷೇತರರು ತಾವು ನೀಡಿದ ಬೆಂಬಲ ವಾಪಸ್ ಪಡೆದಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.
ರೈತರ ಆಂದೋಲನದ ಹಿನ್ನೆಲೆಯಲ್ಲಿ ಸ್ವತಂತ್ರ ಶಾಸಕರಾದ ಬಲರಾಜ್ ಕುಂಡು ಮತ್ತು ಸೋಂಬೀರ್ ಸಾಂಗ್ವಾನ್ ಅವರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಜನವರಿ 2021 ರಲ್ಲಿ, ಇಬ್ಬರು ಸದಸ್ಯರು ಹರಿಯಾಣ ವಿಧಾನಸಭೆಯಿಂದ ಹೊರಬಿದ್ದರು. ಎಲ್ಲೆನಾಬಾದ್ ಶಾಸಕ ಅಭಯ್ ಸಿಂಗ್ ಚೌಟಲಾ ಅವರು ರೈತರ ಆಂದೋಲನ ಬೆಂಬಲಿಸಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅದೇ ಸಮಯದಲ್ಲಿ, ಕಲ್ಕಾದ ಶಾಸಕ ಪ್ರದೀಪ್ ಚೌಧರಿ ಅವರಿಗೆ ಕ್ರಿಮಿನಲ್ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿದ ನಂತರ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.
ಹರಿಯಾಣ ಸರ್ಕಾರದ ಪ್ರಸ್ತುತ ನಿಲುವು: ಒಬ್ಬ ಶಾಸಕರ ಶಾಸಕತ್ವ ಅನರ್ಹಗೊಂಡಿರುವುದರಿಂದ ಹಾಗೂ ಒಬ್ಬರು ರಾಜೀನಾಮೆ ಕೊಟ್ಟಿರುವುದರಿಂದ 90 ಸದಸ್ಯರ ಸದನದ ಬಲ 88ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರ ಬಹುಮತ ಪಡೆಯಲು 45 ಸದಸ್ಯರ ಬೆಂಬಲ ಬೇಕಾಗುತ್ತದೆ. ಸದ್ಯ ಹರಿಯಾಣ ಸರ್ಕಾರಕ್ಕೆ 55 ಸದಸ್ಯರ ಬೆಂಬಲವಿದೆ. ಆದರೆ ಜೆಜೆಪಿಯ ಅರ್ಧದಷ್ಟು ಶಾಸಕರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಜೆಪಿ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದೆ. ಅವಿಶ್ವಾಸ ನಿರ್ಣಯ ಸೋಲಿಸಲು ಖಟ್ಟರ್ ಸನ್ನದ್ಧರಾಗಿದ್ದಾರೆ.