ತಿರುವನಂತಪುರಂ(ಕೇರಳ): ಸಾಧಿಸಬೇಕೆಂಬ ಛಲವಿದ್ದವರು ಯಾವುದೇ ದೊಡ್ಡ ಅಡೆತಡೆಗಳು, ವೈಫಲ್ಯಗಳೇ ಎದುರಾದರೂ ಅವನ್ನೆಲ್ಲಾ ಮೆಟ್ಟಿ ನಿಲ್ಲುವರು. ಇಂತಹ ಅನೇಕ ಉದಾಹರಣೆಗಳು ಈಗಾಗಲೇ ದೊರೆತಿವೆ. ಕೇರಳದಲ್ಲಿ ಅಂತಹದ್ದೇ ಮತ್ತೊಂದು ನಿದರ್ಶನ ಬೆಳಕಿಗೆ ಬಂದಿದೆ. ಹುಟ್ಟಿನಿಂದಲೂ ಶ್ರವಣ ದೋಷ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ಸಹೋದರಿಯರು ಭಾರತೀಯ ಲೋಕಸೇವಾ ಆಯೋಗ(ಯುಪಿಎಸ್ಸಿ) ನಡೆಸುವ ಭಾರತೀಯ ಎಂಜಿನಿಯರಿಂಗ್ ಸೇವಾ ಪರೀಕ್ಷೆಯನ್ನು ಮೊದಲ ಅಟೆಂಪ್ಟ್‌ನಲ್ಲೇ (ಐಇಎಸ್) ಪಾಸ್ ಮಾಡಿದ್ದಾರೆ. ವಿಶೇಷವೆಂದರೆ, ಕೇರಳದಿಂದ ಈ ಇಬ್ಬರು ಸಹೋದರಿಯರು ಮಾತ್ರ ಈ ಸಾಧನೆ ಮಾಡಿದ್ದಾರೆ.
ಕೇರಳದ ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಸೂಪರಿಂಟೆಂಡೆಂಟ್ ಆಗಿರುವ ಸೀತಾ ಎಂಬುವವರ ಮೂವರು ಮಕ್ಕಳು ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರು ಕೇವಲ ಎರಡು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡಿದ್ದಾರೆ. ಆದರೆ, ತಾಯಿ ಸೀತಾ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸಿದ್ದರು. ದೈಹಿಕ ನ್ಯೂನತೆಗಳಿದ್ದರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ವಿದ್ಯಾಭ್ಯಾಸ ಕೊಡಿಸಿರುವ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ನಲ್ಲಿ ಅಧ್ಯಯನ ಮಾಡಿಸಿದ್ದಾರೆ.
ತದನಂತರ, ಇದೇ ಸಹೋದರಿಯರು ತಿರುವನಂತಪುರಂ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದರು. ಇದರ ಬೆನ್ನಲ್ಲೇ ಪಾರ್ವತಿ ಕೇರಳದ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಗಿಟ್ಟಿಸಿಕೊಂಡರೆ, ಸಹೋದರಿ ಲಕ್ಷ್ಮೀ ಸ್ಥಳೀಯ ಆಡಳಿತದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮಹತ್ವದ ನೌಕರಿಯೂ ಇವರನ್ನು ಅರಸಿಕೊಂಡು ಬರುತ್ತದೆ. ಆದರೆ ಈ ನೌಕರಿಯನ್ನು ನಿರಾಕರಿಸಿರುವ ಇಬ್ಬರು ಭಾರತೀಯ ಎಂಜಿನಿಯರಿಂಗ್ ಸೇವಾ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು. ಅದರಂತೆ, 2019ರಿಂದಲೂ ಕಠಿಣ ಪರಿಶ್ರಮ ಹಾಕಿ ತಯಾರಿ ನಡೆಸಿದ್ದಾರೆ. ಇದೀಗ ಫಲಿತಾಂಶ ಬಂದಿದೆ. ಪಾರ್ವತಿ 74ನೇ ರ್ಯಾಂಕ್ ಪಡೆದರೆ, ಲಕ್ಷ್ಮೀ 75ನೇ ರ್ಯಾಂಕ್ ಪಡೆದುಕೊಂಡಿದ್ದಾರೆ!.