ನವದೆಹಲಿ/ಗುವಾಹಟಿ: ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕುಟುಂಬದ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಪಿಪಿಇ ಕಿಟ್ ಡೀಲ್ ಆರೋಪ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು ಪಿಪಿಇ ಕಿಟ್‌ಗಳನ್ನು ಹೆಚ್ಚಿನ ದರದಲ್ಲಿ ಪೂರೈಸಲು ತಮ್ಮ ಪತ್ನಿ ಮತ್ತು ಮಗ ಪಾಲುದಾರಿಕೆ ಹೊಂದಿರುವ ಕಂಪನಿಗಳಿಗೆ ಗುತ್ತಿಗೆ ನೀಡಿದ್ದರು ಎಂದು ಸಿಸೋಡಿಯಾ ದೂರಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಿಸಿಎಂ ಸಿಸೋಡಿಯಾ, ಪಿಪಿಇ ಕಿಟ್ ಡೀಲ್ ಸಂಬಂಧ ಮಾಧ್ಯಮಗಳ ವರದಿ ಉಲ್ಲೇಖಿಸಿ ಆರೋಪ ಮಾಡಿದ್ದಾರೆ. 2020ರಲ್ಲಿ ಅಸ್ಸೋಂ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಹಿಮಂತ ಬಿಸ್ವಾ ಶರ್ಮಾ ಪಿಪಿಇ ಕಿಟ್‌ಗಳನ್ನು ಹೆಚ್ಚಿನ ದರದಲ್ಲಿ ಪೂರೈಸಲು ತಮ್ಮ ಪತ್ನಿ ಮತ್ತು ಮಗನ ಪಾಲುದಾರ ಕಂಪನಿಗಳಿಗೆ ಗುತ್ತಿಗೆ ಕೊಟ್ಟಿದ್ದರು. ಈ ಕಂಪನಿಗಳು ಪಿಪಿಇ ಕಿಟ್‌ಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪೂರೈಸಿವೆ ಎಂದು ಹೇಳಿದ್ದಾರೆ.
ಆಗ ಇದೇ ಅಸ್ಸೋಂ ಸರ್ಕಾರವು ಇತರ ಕಂಪನಿಗಳಿಂದ ತಲಾ 600 ರೂ.ನಂತೆ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಆದರೆ, ಹಿಮಂತ ಅವರು ತಮ್ಮ ಪತ್ನಿ ಮತ್ತು ಮಗ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳಾದ ಜೆಸಿಬಿ ಇಂಡಸ್ಟ್ರೀಸ್ ಮತ್ತು ಮೆಡಿಟೈಮ್ ಹೆಲ್ತ್‌ಕೇರ್‌ಗೆ ಇದೇ ಪಿಪಿಇ ಕಿಟ್‌ಗಳನ್ನು 990 ರೂ.ಗೆ ತುರ್ತಾಗಿ ಪೂರೈಸುವಂತೆ ಆದೇಶಿಸಿದ್ದರು. ಈ ಮೂಲಕ ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯನ್ನೂ ತಮ್ಮ ಸ್ವಂತಕ್ಕಾಗಿ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಮಾನನಷ್ಟ ಮೊಕದ್ದಮೆ ಎಚ್ಚರಿಕೆ: ಇತ್ತ, ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಈ ಆರೋಪವನ್ನು ಸಿಎಂ ಹಿಮಂತ ಬಿಸ್ವಾ ಶರ್ಮಾ ತಳ್ಳಿಹಾಕಿದ್ದಾರೆ. ಅಲ್ಲದೇ, ಇಂತಹ ಆರೋಪಗಳನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಸಿಸೋಡಿಯಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿ ಟ್ವೀಟ್ ಮಾಡಿದ್ದಾರೆ.
ತಮ್ಮ ಪತ್ನಿಯ ಕಂಪನಿಯು ಸರ್ಕಾರಕ್ಕೆ ಪಿಪಿಇ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಅಸ್ಸೋಂನಲ್ಲಿ ಒಂದೇ ಒಂದು ಪಿಪಿಇ ಕಿಟ್ ಇಲ್ಲದ ಸಮಯದಲ್ಲಿ ನಮ್ಮ ಪತ್ನಿ ಜನರ ಅಮೂಲ್ಯ ಜೀವಗಳನ್ನು ಉಳಿಸಲು 1,500 ಕಿಟ್‌ಗಳನ್ನು ಉಚಿತವಾಗಿ ಪೂರೈಸಿದ್ದಾರೆ. ಇದಕ್ಕಾಗಿ ಒಂದೇ ಒಂದೂ ಪೈಸೆ ವಹಿವಾಟು ನಡೆಸಿಲ್ಲ. ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮಕ್ಕಳ ಭವಿಷ್ಯದ ನಿರ್ಧಾರವನ್ನ ಅರ್ಹತೆಯಿಲ್ಲದ ಕೈಗಳಿಗೆ ವಹಿಸಲಾಗಿದೆ: ರಾಹುಲ್ ಗಾಂಧಿ