ಸಿರ್ಮೂರ್( ಹಿಮಾಚಲ ಪ್ರದೇಶ): ಉತ್ತರಭಾರತದಲ್ಲಿ ವರುಣನ ರೌದ್ರಾವತಾರ ಮುಂದುವರೆದಿದೆ. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಪೌಂಟಾ ಸಾಹಿಬ್ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದ ಮೇಘ ಸ್ಫೋಟದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಪೌಂಟಾ ಸಾಹಿಬ್ ಉಪವಿಭಾಗದ ಮಲ್ಗಿ ಅರಣ್ಯ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
ರಾತ್ರಿ ಸಮಯದಲ್ಲಿ ಸಂಭವಿಸಿದೆ ಈ ಮೇಘಸ್ಫೋಟದಿಂದಾಗಿ ಸಿರ್ಮೌರಿ ತಾಲ್ ಗ್ರಾಮವು ಪ್ರವಾಹಕ್ಕೆ ತುತ್ತಾಗಿದೆ. ಭೂಕುಸಿತ ಮತ್ತು ಜೌಗು ಪ್ರದೇಶದಿಂದಾಗಿ ಇಡೀ ಗ್ರಾಮವೇ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಜನರ ಬುದುಕು ಸಹ ಸಂಪೂರ್ಣವಾಗಿ ನಾಶವಾಗಿದೆ. ಮೇಘಸ್ಫೋಟದಿಂದ ಉಂಟಾದ ಪ್ರವಾಹಕ್ಕೆ ಸಿರ್ಮೌರಿ ತಾಳದ ವಿನೋದ್ ಕುಮಾರ್ ಎಂಬ ಕುಟುಂಬ ಜಲ ಸಮಾದಿಯಾಗಿದೆ. ಅಂದು ರಾತ್ರಿ ನಡೆದ ಘಟನೆಯಲ್ಲಿ ಈ ಕುಟುಂಬದ ಐವರೂ ನಾಪತ್ತೆಯಾಗಿದ್ದರು.
ಆ ಬಳಿಕ ಅಲ್ಲಿನ ಸರ್ಕಾರ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಗುರುವಾರ ವಿನೋದ್ ಕುಮಾರ್ ಅವರ ತಂದೆ ಕುಲದೀಪ್ ಸಿಂಗ್ ಮತ್ತು ಅವರ ಪುತ್ರಿ ದೀಪಿಕಾ ಅವರ ಮೃತದೇಹಗಳನ್ನು ರಕ್ಷಣಾ ತಂಡ ಪತ್ತೆ ಹಚ್ಚಿ ಹೊರತೆಗೆದಿವೆ. ಅವಶೇಷಗಳಡಿ ಇನ್ನೂ ಮೂವರು ಸಿಲುಕಿದ್ದು, ಆ ದೇಹಗಳನ್ನು ಮೇಲೆತ್ತಲು ಗುರುವಾರ ಮತ್ತು ಶುಕ್ರವಾರ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಅಂತಿಮವಾಗಿ ಕಠಿಣ ರಕ್ಷಣಾ ಕಾರ್ಯಾಚರಣೆ ಬಳಿಕ ಅವಶೇಷಗಳ ಅಡಿ ಸಿಲುಕಿದ್ದ ಆ ಮೃತ ದೇಹಗಳನ್ನು ಹೊರೆ ತೆಗೆಯುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಸತತ ಎರಡು ದಿನಗಳ ಕಾರ್ಯಾಚರಣೆ ಬಳಿಕ ಎಲ್ಲ ಐವರು ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಘಟನೆ ನಡೆದಿದ್ದಾದರೂ ಹೇಗೆ?: ಸಿರ್ಮೂರ್ ಜಿಲ್ಲೆಯ ಪೌಂಟಾ ಸಾಹಿಬ್‌ನ ಮಲ್ಗಿ ಅರಣ್ಯದಲ್ಲಿ ಬುಧವಾರ ರಾತ್ರಿ ಮೋಡ ಕವಿದ ವಾತಾವರಣ ಉಂಡಾಗಿತ್ತು. ಪೌಂಟಾ ಸಾಹಿಬ್ ಉಪವಿಭಾಗದಲ್ಲಿ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಸತತವಾಗಿ ಧಾರಾಕಾರ ಮಳೆ ಎಡಬಿಡದೇ ಸುರಿದಿತ್ತು. ಇದಕ್ಕಿದ್ದಂತೆ ಮುಗಿಲಲ್ಲಿ ಆದ ಮೇಘಸ್ಫೋಟದಿಂದಾಗಿ ಬೃಹತ್ ಮರಗಳು, ಬಂಡೆಗಳು ಗ್ರಾಮದ ಮೇಲೆ ಉರುಳಿ ಬಿದ್ದಿವೆ. ಸುಮಾರು 25 ರಿಂದ 30 ನಿಮಿಷಗಳಲ್ಲಿ ಪ್ರವಾಹ ಸಿರ್ಮೌರಿ ಗ್ರಾಮಕ್ಕೆ ಅಪ್ಪಳಿಸಿದೆ. ಈ ಪರಿಣಾಮ ಗ್ರಾಮದಲ್ಲಿ ಭಾರಿ ಪ್ರಳಯವನ್ನೇ ಸೃಷ್ಟಿಸಿದೆ. ರಾತ್ರಿ 9ರ ಬಳಿಕ ಮೇಘಸ್ಫೋಟ ಆಗಿ ಭಾರಿ ಪ್ರಮಾಣದ ಹಾನಿ ಆಗಿರುವ ಬಗ್ಗೆ ಗ್ರಾಮಸ್ಥರು ಪೌಂಟಾ ಸಾಹಿಬ್ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದು ಜಿಲ್ಲಾಡಳಿತ ಹಾಗೂ ರಕ್ಷಣಾ ಪಡೆಗಳು ಸ್ಥಳಕ್ಕೆ ಬರುವ ಹೊತ್ತಿಗೆ ಮಹಾ ವಿಪತ್ತು ನಡೆದು ಹೋಗಿತ್ತು.
ಇದನ್ನು ಓದಿ:Himachal Accident: ಕಂದಕಕ್ಕೆ ಬಿದ್ದ ಬೊಲೆರೊ ವಾಹನ: 6 ಪೊಲೀಸ್ ಸಿಬ್ಬಂದಿ ಸೇರಿ 7 ಸಾವು