ಚಂಡೀಗಢ(ಹರಿಯಾಣ): ಸಿಂಘು ಗಡಿಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಂದು ಆತನ ದೇಹವನ್ನು ಪೊಲೀಸ್ ಬ್ಯಾರಿಕೇಡ್‌ನಲ್ಲಿ ನೇತು ಹಾಕಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಖಂಡನೆ ವ್ಯಕ್ತಪಡಿಸಿದ್ದು, ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ಕರೆದು ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಹರಿಯಾಣ ಗೃಹ ಸಚಿವ ಅನಿಲ್ ವಿಜ್, ಪೊಲೀಸ್ ಮಹಾನಿರ್ದೇಶಕರು ಮತ್ತು ಇತರ ಉನ್ನತ ಅಧಿಕಾರಿಗಳು ಭಾಗವಹಿಸಿದ್ದು, ಸಿಎಂ ಮನೋಹರ ಲಾಲ್ ಖಟ್ಟರ್ ತನಿಖೆಗೆ ಆದೇಶಿಸಿದ್ದಾರೆ.
ಮೃತ ವ್ಯಕ್ತಿಯನ್ನು ತಾರ್ನ್ ತರನ್ ಜಿಲ್ಲೆಯ ಚೀಮಾ ಖುರ್ದ್ ಗ್ರಾಮದ ನಿವಾಸಿ ಲಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆರೋಪಿ ಶರಣು..
ಸಿಂಘು ಗಡಿಯಲ್ಲಿ ವ್ಯಕ್ತಿಯನ್ನು ಕೊಂದ ಹೊಣೆಯನ್ನು ನಿಹಾಂಗ್ ಸಿಖ್ ಗುಂಪಿನ ಸದಸ್ಯನಾದ ಸರಬ್ಜಿತ್ ಸಿಂಗ್ ಹೊತ್ತಿದ್ದು, ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಿಖ್ ಧರ್ಮದ ಪವಿತ್ರ ಪುಸ್ತಕವನ್ನು ಅಪವಿತ್ರಗೊಳಿಸಿದ ಕಾರಣಕ್ಕಾಗಿ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಪಾಕ್ ಗುಪ್ತಚರ ಇಲಾಖೆಗೆ ಸೇನಾ ಮಾಹಿತಿ ರವಾನಿಸಿದ್ದ ಆರೋಪಿಗೆ ಪೊಲೀಸ್ ಕಸ್ಟಡಿ