ಚಂಡೀಗಢ: ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿರುವುದಾಗಿ ನವಜೋತ್ ಸಿಂಗ್ ಸಿಧು ಘೋಷಿಸಿದ್ದಾರೆ.
ಚಂಡೀಗಢದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜೀನಾಮೆ ವೈಯಕ್ತಿಕ ಅಹಂಕಾರದ್ದಲ್ಲ. ಪ್ರತಿಯೊಬ್ಬ ಪಂಜಾಬಿಗರ ಹಿತಾಸಕ್ತಿಯಾಗಿತ್ತು. ಅದಕ್ಕಾಗಿಯೇ ನಾನು ನನ್ನ ಹೆಸರನ್ನು ಬಹಳ ಉಗ್ರವಾಗಿ ಸಮರ್ಥಿಸಿಕೊಳ್ಳುತ್ತೇನೆ. ಏಕೆಂದರೆ ನನ್ನ ಮೇಲೆ ಸಾಕಷ್ಟು ಜವಾಬ್ದಾರಿ ಇದೆ' ಎಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಸಿಧು ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಗೊಂದಲಗಳ ನಡುವೆ ಈ ಇಬ್ಬರು ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ಸಿಧು ಹೇಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರೊಂದಿಗಿನ ಮುಸುಕಿನ ಗುದ್ದಾಟ ಹಿನ್ನೆಲೆಯಲ್ಲಿ ಸಿಧು ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸರ್ಕಾರ ಘೋಷಿಸುತ್ತಿರುವ ಯೋಜನೆಗಳನ್ನು ಲಾಲಿಪಾಪ್‌ಗೆ ಹೋಲಿಸಿ ಟೀಕಿಸಿದ್ದರು.
ಇದನ್ನೂ ಓದಿ: ಪಂಜಾಬ್ ಸಿಎಂ ವಿರುದ್ಧವೇ ತಿರುಗಿಬಿದ್ದ ನವಜೋತ್ ಸಿಂಗ್ ಸಿಧು ; ಚನ್ನಿ ಯೋಜನೆಗಳನ್ನು ಲಾಲಿಪಾಪ್‌ಗೆ ಹೋಲಿಸಿ ಟೀಕೆ