ನವದೆಹಲಿ: ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖಂಡ ನವಜೋತ್ ಸಿಂಗ್ ಸಿಧು ದೆಹಲಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದೆಹಲಿಯ ಎಂ.ಎಸ್. ಗಾಂಧಿ ನಿವಾಸದಲ್ಲಿ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸಭೆ ಮುಗಿದ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಟ್ವಿಟರ್ನಲ್ಲಿ ಸಿಧು ಹಂಚಿಕೊಂಡಿದ್ದಾರೆ. ಹಾಗೂ ಪ್ರಿಯಾಂಕಾ ಗಾಂಧಿಯವರ ಜೊತೆ ಸುದೀರ್ಘ ಸಭೆ ನಡೆಸಿದ್ದೇನೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ 2022ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ನವಜೋತ್ ಸಿಂಗ್ ಸಿಧು, ಪಕ್ಷದಲ್ಲಿ ತಮ್ಮ ಸ್ಥಾನ, ಜವಾಬ್ದಾರಿ ಕುರಿತು ಪ್ರಿಯಾಂಕಾ ಗಾಂಧಿಯವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಈ ಮೊದಲು ಸಿಧು ರಾಹುಲ್ ಗಾಂಧಿಯವರನ್ನು ಮಂಗಳವಾರ ಭೇಟಿಯಾಗುವುದಾಗಿ ಹೇಳಿದ್ದರು. ನಂತರ ರಾಹುಲ್ ಗಾಂಧಿ ಜೊತೆ ಯಾವುದೇ ಸಭೆಗೆ ಸಮಯ ನಿಗದಿಯಾಗಿಲ್ಲ ಎಂದಿದ್ದರು. ಅಲ್ಲದೇ ಅವರು ಪಂಜಾಬ್ ಮುಖ್ಯಮಂತ್ರಿಯೊಂದಿಗಿನ ತಮ್ಮ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ರಚಿಸಲಾದ ಸಮಿತಿಯನ್ನು ಭೇಟಿಯಾದರು.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಸಿಧು, ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್ನಲ್ಲಿ ಉಂಟಾಗಿರುವ ಅಸಮಾಧಾನ ಹೋಗಲಾಡಿಸಲು ರಾಹುಲ್ ಗಾಂಧಿ ಪಂಜಾಬ್ನ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಸಚಿವರು, ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿದ್ದಾರೆ. ಬ್ರಹ್ಮ್ ಮೋಹಿಂದ್ರಾ, ವಿಜಯ್ ಇಂದರ್ ಸಿಂಗ್ಲಾ, ಬಲ್ಬೀರ್ ಸಿಂಗ್ ಸಿಧು ಮತ್ತು ರಾಜ್ಯಸಭಾ ಸದಸ್ಯ ಶಂಶರ್ ಸಿಂಗ್ ದುಲ್ಲೊ ಮತ್ತು ಶಾಸಕ ಲಖ್ವೀರ್ ಸಿಂಗ್ ಲಖಾ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.