ಸಾಂಗ್ಲಿ (ಮಹಾರಾಷ್ಟ್ರ): ಎರಡು ದಿನದ ಅಂತರದಲ್ಲಿ ಹಾವು ಕಡಿದು ಅಕ್ಕ-ತಮ್ಮ ಇಬ್ಬರೂ ದುರಂತ ಅಂತ್ಯ ಕಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.
ಮೃತರನ್ನು ವಿರಾಜ್ ಕದಮ್ ಮತ್ತು ಸಯಾಲಿ ಜಾಧವ್ ಎಂದು ಗುರುತಿಸಲಾಗಿದೆ. ಸಹೋದರಿಗೆ ವಿವಾಹವಾಗಿ ಬೇರೆ ಊರಲ್ಲಿ ನೆಲೆಸಿದ್ದರು. ತಮ್ಮನ ಅಂತಿಮ ವಿಧಿವಿಧಾನಕ್ಕೆಂದು ತವರಿಗೆ ಆಗಮಿಸಿದ್ದ ವೇಳೆ ಆಕೆಯೂ ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಅಕ್ಟೋಬರ್ 6ರ ರಾತ್ರಿ ಗಾಢನಿದ್ದೆಯಲ್ಲಿದ್ದ ಸಹೋದರ ವಿರಾಜ್ಗೆ ಹಾವು ಕಡಿದು, ಆತ ಅರೆಪ್ರಜ್ಞಾವಸ್ಥೆಯಲ್ಲಿದ್ದ. ಇದನ್ನು ಕಂಡು ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದಿದ್ದ.
ಈ ಘಟನೆ ನಡೆದು ಎರಡು ದಿನದ ಬಳಿಕ ಅಕ್ಟೋಬರ್ 8ರಂದು ಸಹೋದರಿ ಮನೆಯಲ್ಲಿದ್ದಾಗ ಆಕೆಗೂ ಹಾವು ಕಚ್ಚಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.15ರಂದು ಆಕೆ ಮೃತಪಟ್ಟರು.
ಒಡಹುಟ್ಟಿದ್ದವರ ದುರಂತ ಮೃತ್ಯುವಿನಿಂದಾಗಿ ಕುಟುಂಬಸ್ಥರು ತೀವ್ರ ಆಘಾತದಲ್ಲಿದ್ದಾರೆ. ಒಂದೇ ಹಾವು ಇಬ್ಬರಿಗೂ ಕಚ್ಚಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದು, ಹಾವಿಗಾಗಿ ಶೋಧ ನಡೆಸಿದರೂ ಪತ್ತೆಯಾಗಿಲ್ಲ.