ಸಾಂಗ್ಲಿ(ಮಹಾರಾಷ್ಟ್ರ): ಒಡಹುಟ್ಟಿದ ಸಹೋದರ ಹಾಗೂ ಸಹೋದರಿ ವಿಷ ಸರ್ಪ ಕಚ್ಚಿರುವ ಪರಿಣಾಮ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಇವರಿಬ್ಬರು ಖಾನಾಪುರ ತಾಲೂಕಿನ ಆಲಸಂದ್ದವರು ಎಂದು ವರದಿಯಾಗಿದೆ.
ಮೃತರನ್ನ ವಿರಾಜ್ ಕದಂ ಹಾಗೂ ಸಯಾಲಿ ಎಂದು ಗುರುತಿಸಲಾಗಿದೆ. ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ ಆಲಸಂದ್ ನಿವಾಸಿ ವಿರಾಜ್ ಮನೆಯಲ್ಲಿ ಮಲಗಿದ್ದ ವೇಳೆ ಅಕ್ಟೋಬರ್ 6ರ ಮಧ್ಯರಾತ್ರಿ ಹಾವಿನಿಂದ ಕಡಿತಕ್ಕೊಳಗಾಗಿದ್ದಾನೆ. ಈ ವೇಳೆ, ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಾಣ ಕಳೆದುಕೊಂಡಿದ್ದಾನೆ. ಇದಾದ ನಂತರ ಆತನ ಸಹೋದರಿ ಸಯಾಲಿ, ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಲಸಂದ್ಗೆ ಬಂದಿದ್ದಳು.
ರಾತ್ರಿ ಮನೆಯಲ್ಲಿ ಮಗಲಿರುವ ವೇಳೆ ಅಕ್ಟೋಬರ್ 8ರಂದು ಆಕೆಗೂ ಹಾವು ಕಚ್ಚಿದೆ. ಚಿಕಿತ್ಸೆಗಾಗಿ ಸಾಂಗ್ಲಿ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವಳು ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿರಿ: ಅಚ್ಚರಿಯಾದರೂ ನಿಜ...ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
ಮಗನ ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ್ದ ಕುಟುಂಬಕ್ಕೆ ಇದೀಗ ಮಗಳನ್ನು ಕಳೆದುಕೊಂಡಿರುವ ಶಾಕ್ನಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಘಟನೆಯಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.