ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಕುಖ್ಯಾತ ಆರೋಪಿ ಅಫ್ತಾಬ್ ಪೂನಾವಾಲಾನನ್ನು ದೆಹಲಿ ಪೊಲೀಸರು ಗುರುವಾರ ಸಾಕೇತ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ಅವಧಿಗೆ ಕಸ್ಟಡಿ ಕೋರಲಿದ್ದಾರೆ. ಆರೋಪಿಯು ಸ್ವತಃ ಅಪರಾಧ ಒಪ್ಪಿಕೊಂಡಿದ್ದಾನೆ. ಕೊಲೆಯ ವಿವರಗಳನ್ನು ಹೇಳಿದ್ದರೂ, ಆತ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಆತ ಪ್ರಕರಣದ ದಾರಿ ತಪ್ಪಿಸುತ್ತಿರಬಹುದು. ಆರೋಪಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಕನಿಷ್ಠ ಒಂದು ವಾರ ಹೆಚ್ಚುವರಿ ಕಸ್ಟಡಿ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಪೊಲೀಸರು ಮೆಹ್ರೌಲಿ ಅರಣ್ಯ ಪ್ರದೇಶದಿಂದ ಮಾನವ ಮೂಳೆಗಳೆಂದು ಶಂಕಿಸಲಾದ ಕೆಲವು ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ದೃಢೀಕರಣಕ್ಕಾಗಿ ವಿಧಿವಿಜ್ಞಾನ ತಂಡಕ್ಕೆ ಕಳುಹಿಸಿದ್ದಾರೆ. ಮೇ 18 ರಂದು ಅಫ್ತಾಬ್ ಶ್ರದ್ಧಾಳ ಕತ್ತು ಹಿಸುಕಿ ಕೊಂದ ನಂತರ ಆಕೆಯ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಮೆಹ್ರೌಲಿ ಫ್ಲಾಟ್‌ನಲ್ಲಿ ಕೆಲ ರಕ್ತದ ಕಲೆಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಫ್ತಾಬ್ ಕೊಲೆ ಮಾಡಲು ಉಪಯೋಗಿಸಿದ ಆಯುಧ ಮತ್ತು ಫ್ರಿಡ್ಜ್ ಸೇರಿದಂತೆ ನೆರೆಹೊರೆಯವರು, ಸ್ನೇಹಿತರು ಮತ್ತು ಅಂಗಡಿಕಾರರಿಂದ ಪೊಲೀಸರು ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಶ್ರದ್ಧಾಳನ್ನು ಕೊಲೆ ಮಾಡಿದ್ದ ಅಫ್ತಾಬ್, ಅವಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅವನ್ನು ಫ್ರಿಜ್ನಲ್ಲಿ ಇಟ್ಟಿದ್ದ.
ಆದಾಗ್ಯೂ, ಪ್ರಕರಣದ ಕೆಲ ಪ್ರಮುಖ ಪುರಾವೆಗಳು ಇನ್ನೂ ಪತ್ತೆಯಾಗಿಲ್ಲ. ಕೊಲೆಗೆ ಉಪಯೋಗಿಸಿದ ಆಯುಧ, ಸಂತ್ರಸ್ತೆಯ ತಲೆಬುರುಡೆ ಇನ್ನೂ ಸಿಕ್ಕಿಲ್ಲ. ಶ್ರದ್ಧಾಳ ಕತ್ತರಿಸಿದ ತಲೆಯನ್ನು ಅಫ್ತಾಬ್ ತನ್ನ ಫ್ರಿಡ್ಜ್‌ನಲ್ಲಿ ಹಲವಾರು ದಿನಗಳವರೆಗೆ ಇಟ್ಟುಕೊಂಡಿದ್ದನಂತೆ. ರಕ್ತದ ಕಲೆಗಳಿರುವ ತನ್ನ ಮತ್ತು ಶ್ರದ್ಧಾಳ ಬಟ್ಟೆಗಳನ್ನು ಕಸದ ಗಾಡಿಯಲ್ಲಿ ಹಾಕಿರುವುದಾಗಿ ಆತ ಹೇಳಿದ್ದಾನೆ. ಶ್ರದ್ಧಾಳ ಮೊಬೈಲ್ ಫೋನ್ ಕೂಡ ನಾಪತ್ತೆಯಾಗಿದೆ.
ಪತ್ತೆಯಾದ ಮೂಳೆಗಳ ಡಿಎನ್‌ಎ ಪರೀಕ್ಷೆಯ ಫಲಿತಾಂಶ ಪಡೆಯಲು ವಿಧಿವಿಜ್ಞಾನ ತಂಡಕ್ಕೆ ಸುಮಾರು 15 ದಿನಗಳು ಬೇಕಾಗುತ್ತವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಏತನ್ಮಧ್ಯೆ, ಆರೋಪಿಯು ವಿಚಾರಣೆಯ ಸಮಯದಲ್ಲಿ ತನ್ನ ಹೇಳಿಕೆಗಳನ್ನು ಹಲವು ಬಾರಿ ಬದಲಾಯಿಸಿದ್ದರಿಂದ ಆರೋಪಿಯ ನಾರ್ಕೋ-ಟೆಸ್ಟ್‌ಗೆ ಅನುಮತಿ ಕೋರಿದ್ದಾರೆ. ಆರೋಪಿಯು ಮೂರು ವರ್ಷಗಳ ಹಿಂದೆ ಶ್ರದ್ಧಾಳನ್ನು ಭೇಟಿಯಾಗಿದ್ದ ಸಿಸಿಟಿವಿ ರೆಕಾರ್ಡ್ಗಳು, ಕರೆ ದಾಖಲೆಗಳು ಮತ್ತು ಡೇಟಿಂಗ್ ಆ್ಯಪ್ ಬಂಬಲ್ ಮೂಲಕ ಹೆಚ್ಚಿನ ಪುರಾವೆಗಳನ್ನು ಪಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವುದರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಲವ್ ಜಿಹಾದ್ ಆಯಾಮದಲ್ಲಿ ತನಿಖೆ.. ಅಫ್ತಾಬ್ನನ್ನು ಮರಣ ದಂಡನೆಗೆ ಗುರಿಪಡಿಸುವಂತೆ ಶ್ರದ್ಧಾ ತಂದೆ ಆಗ್ರಹ