ನವದೆಹಲಿ : ನಿರ್ದಿಷ್ಟ ಪೋಷಕಾಂಶ ಅಥವಾ ಪೂರಕ ಆಹಾರಗಳನ್ನು ಸೇವಿಸುವ ಕುರಿತು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಲಹೆಗಳನ್ನು ನೀಡುವ ಆರೋಗ್ಯ ಇನ್ಫ್ಲುಯೆನ್ಸರ್ಗಳು ಅಥವಾ ಇನ್ಫ್ಲುಯೆನ್ಸರ್ಗಳ ಸಂಸ್ಥೆಯು (health influencers) ತಾವು ಆ ಬಗ್ಗೆ ಹೊಂದಿರುವ ಅರ್ಹತೆ ಮತ್ತು ಅನುಭವಗಳನ್ನು ಪ್ರಮಾಣೀಕರಿಸುವುದು ಕಡ್ಡಾಯವಾಗಲಿದೆ. ಹಣ ಪಡೆದು ನಿರ್ದಿಷ್ಟ ಪೋಷಕಾಂಶ ಅಥವಾ ಪೂರಕ ಆಹಾರಗಳನ್ನು ಸೇವಿಸುವ ಬಗ್ಗೆ ಸಲಹೆಗಳನ್ನು ನೀಡುವುದನ್ನು ಅಥವಾ ತಮ್ಮ ಫಾಲೋವರ್ಗಳಿಗೆ ಅರ್ದಂಬರ್ಧ ಮಾಹಿತಿ ನೀಡುವುದನ್ನು ತಡೆಗಟ್ಟಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಇಂಥ ನಿಯಮ ತರಲು ಮುಂದಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ಸಾಮಾಜಿಕ ಮಾಧ್ಯಮದ ಇನ್ಫ್ಲುಯೆನ್ಸರ್ಗಳು ವಿಶೇಷವಾಗಿ ಆರೋಗ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಅರೆಬೆಂದ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹರಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆಸುತ್ತಿದೆ.
ಮುಂದಿನ ತಿಂಗಳೊಳಗೆ ಜಾರಿಯಾಗಲಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಅಂಥ ಇನ್ಫ್ಲುಯೆನ್ಸರ್ಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಸ್ಕ್ಲೇಮರ್ (ಹಕ್ಕು ನಿರಾಕರಣೆಗಳನ್ನು)ಗಳನ್ನು ಪ್ರಕಟಿಸಬೇಕಾಗುತ್ತದೆ. ಆರೋಗ್ಯ ಹಾಗೂ ಹಣಕಾಸು ಸಂಬಂಧಿತ ಲೇಖನಗಳನ್ನು ಆನ್ಲೈನ್ನಲ್ಲಿ ಪ್ರಕಟಿಸುವ ಆರೋಗ್ಯ ಇನ್ಫ್ಲುಯೆನ್ಸರ್ಗಳು ತಾವು ನಿಜವಾದ ಪೌಷ್ಟಿಕತಜ್ಞರೇ ಅಥವಾ ಅವರು ಉತ್ಪನ್ನವೊಂದನ್ನು ಪ್ರಚಾರ ಮಾಡುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸುವುದು ಕಡ್ಡಾಯವಾಗಲಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಮಾರ್ಗಸೂಚಿಗಳ ಅಡಿಯಲ್ಲಿ ಅಂಥ ಇನ್ಫ್ಲುಯೆನ್ಸರ್ಗಳು ತಮ್ಮ ಚಂದಾದಾರರನ್ನು ನಿರ್ದಿಷ್ಟ ಪೋಷಕಾಂಶ ಅಥವಾ ಪೂರಕ ಆಹಾರವನ್ನು ಬಳಸಲು ಸಲಹೆ ನೀಡುತ್ತಿದ್ದರೆ ತಾವು ಆ ವಿಷಯದಲ್ಲಿ ತಜ್ಞರಾಗಿರುವ ಬಗ್ಗೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆ ನಿರ್ದಿಷ್ಟ ಉತ್ಪನ್ನದೊಂದಿಗೆ ತಮ್ಮ ಸಂಪರ್ಕವನ್ನು ಸ್ಥಾಪಿಸಲು ಅಂತಹ ಇನ್ಫ್ಲುಯೆನ್ಸರ್ಗಳು ಡಿಸ್ಕ್ಲೇಮರ್ಗಳನ್ನು ಪ್ರಕಟಿಸಬೇಕು ಮತ್ತು ಅವರು ಚಂದಾದಾರರಿಗೆ ಯಾವ ಅರ್ಹತೆಯ ಆಧಾರದಲ್ಲಿ ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಂತಹ ಇನ್ಫ್ಲುಯೆನ್ಸರ್ಗಳು ಯಾವುದೇ ನಿರ್ದಿಷ್ಟ ವಿಷಯದಲ್ಲಿ ತಪ್ಪು ಮಾಹಿತಿ ಮಾಹಿತಿ ಹರಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈ ಮಾರ್ಗಸೂಚಿಗಳ ಹಿಂದಿನ ಆಲೋಚನೆಯಾಗಿದೆ.
ಆರೋಗ್ಯ ಮತ್ತು ಯೋಗಕ್ಷೇಮ ಕಂಟೆಂಟ್ ಇನ್ಫ್ಲುಯೆನ್ಸರ್ಗಳು ನಿರ್ದಿಷ್ಟ ಪೂರಕ ಆಹಾರಗಳನ್ನು ಬಳಸುವ ಬಗ್ಗೆ ಸಲಹೆ ನೀಡುವುದನ್ನು ಸಾಮಾನ್ಯವಾಗಿ ಕಾಣಬಹುದು. ಅವರು ಕೇವಲ ಉತ್ಪನ್ನವನ್ನು ಅನುಮೋದಿಸುತ್ತಿದ್ದಾರೆಯೇ ಮತ್ತು ಪೋಷಕಾಂಶಗಳ ಹೆಸರಿನಲ್ಲಿ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆಯೇ ಅಥವಾ ಈ ಕ್ಷೇತ್ರದಲ್ಲಿ ಅವರು ನಿಜವಾದ ಪರಿಣಿತರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬಯಸುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಭಾವಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒದಗಿಸುವ ಮಾಹಿತಿಯಿಂದ ಗ್ರಾಹಕರು ತಪ್ಪುದಾರಿಗೆಳೆಯಲ್ಪಡುತ್ತಾರೆ, ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಉತ್ಪನ್ನಗಳನ್ನು ಖರೀದಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದರು.
ಹಣಕಾಸು ವಲಯದ ಇನ್ಫ್ಲುಯೆನ್ಸರ್ಗಳು ಅಥವಾ "ಫಿನ್‌ಫ್ಲುಯೆನ್ಸರ್‌ಗಳು" ಸಹ ತಮ್ಮ ಫಾಲೋವರ್ಗಳಿಗೆ ವಿವಿಧ ಹಣಕಾಸು ಉತ್ಪನ್ನಗಳ ಕುರಿತು ಮಾಹಿತಿಯನ್ನು ಒದಗಿಸುತ್ತಾರೆ, ನಿರ್ದಿಷ್ಟ ಯೋಜನೆಗಳು ಅಥವಾ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ. ಇಂಥವರೂ ಕೂಡ ಈ ಮಾರ್ಗಸೂಚಿಗಳ ವ್ಯಾಪ್ತಿಯೊಳಗೆ ಬರುತ್ತಾರೆ. ಅವರೂ ಸಹ ತಮ್ಮ ಪರಿಚಯವನ್ನು ಪ್ರಕಟಿಸಬೇಕಾಗುತ್ತದೆ. ಅವರು ಅರ್ಹ ಹಣಕಾಸು ಸಲಹೆಗಾರರೇ ಅಥವಾ ಹೂಡಿಕೆ ಸಲಹೆಗಾರರ ವೇಷದಲ್ಲಿ ನಿರ್ದಿಷ್ಟ ಯೋಜನೆ ಅಥವಾ ಹಣಕಾಸು ಉತ್ಪನ್ನವನ್ನು ಪ್ರಚಾರ ಮಾಡುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ.
ಇದನ್ನೂ ಓದಿ : Threads ಆ್ಯಪ್: ಏಳು ಗಂಟೆಗಳಲ್ಲಿ 10 ಮಿಲಿಯನ್ ಸೈನ್ ಅಪ್