ಶ್ರೀನಗರ(ಜಮ್ಮು-ಕಾಶ್ಮೀರ): ಕಣಿವೆ ನಾಡಿನಲ್ಲಿ ಉಗ್ರರ ಉಪಟಳ ಮುಂದುವರೆದಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನಾಧಿಕಾರಿಗಳು, ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ತಂಡಗಳು ಡ್ರಾಗಡ್ ಹಳ್ಳಿಯ ಚೀರ್‌ಬಾಗ್ ಪ್ರದೇಶದಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಭದ್ರತಾ ಪಡೆಗಳು ಉಗ್ರರ ಅಡಗುತಾಣವನ್ನು ಸಮೀಪಿಸುತ್ತಿದ್ದಂತೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಸೇನೆ ಕೂಡಲೇ ಪ್ರತಿದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದೆ ಎಂದು ತಿಳಿಸಿದರು.
ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಮಾತನಾಡಿ, 'ಹತನಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಆದಿಲ್ ಅಹ್ ವಾನಿ ಎಂದು ಗುರುತಿಸಲಾಗಿದೆ. 2020ರ ಜುಲೈನಿಂದ ಈತ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ. ಪುಲ್ವಾಮಾದ ಲಿಟ್ಟರ್‌ನಲ್ಲಿ ಒಬ್ಬ ಬಡ ಕಾರ್ಮಿಕನ ಹತ್ಯೆಯಲ್ಲೂ ಭಾಗಿಯಾಗಿದ್ದ. ಕಳೆದ 2 ವಾರಗಳಲ್ಲಿ 15 ಭಯೋತ್ಪಾದಕರ ಹತ್ಯೆ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.