ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಶ್ರೀನಗರದ ನವನ್ ಬಜಾರ್ ಪ್ರದೇಶದಲ್ಲಿನ 'ಜಾನ್ ಕೇಪ್ ಹೌಸ್' ಅಂಗಡಿಯು ವಿಶಿಷ್ಟ ಕ್ಯಾಪ್ (ಖರಾಕುಲಿ)ತಯಾರಿಕೆಗೆ ಪ್ರಸಿದ್ಧಿಯಾಗಿದೆ. ಸುಮಾರು 125 ವರ್ಷಗಳಷ್ಟು ಹಳೆಯದಾದ ಈ ಅಂಗಡಿಯಲ್ಲಿ ತಯಾರಾಗುವ ಖರಾಕುಲಿ ಕ್ಯಾಪ್ ಕಾಶ್ಮೀರದ ರಾಯಲ್ ಕ್ಯಾಪ್ ಎಂದೇ ಪರಿಗಣಿಸಲ್ಪಟ್ಟಿದೆ. ಅಲ್ಲದೇ ಕಾಶ್ಮೀರಿಗರಿಗೆ ಇದು ಗೌರವ ಮತ್ತು ಘನತೆಯ ಸಂಕೇತವಾಗಿದೆ.
ನಾಲ್ಕನೇ ತಲೆಮಾರಿನ ಕರಾಕುಲಿ ಕ್ಯಾಪ್ ತಯಾರಕರಾದ ಮುಜಾಫರ್ ಜಾನ್ ಈ ಕ್ಯಾಪ್ ಕುರಿತಾಗಿ ಮಾಹಿತಿ ನೀಡಿದ್ದಾರೆ. ಈ ಕ್ಯಾಪ್ನಲ್ಲಿ ಮೂರು ಮೂಲ ಶೈಲಿಗಳಿವೆಯಂತೆ. ಮೊದಲನೆಯದು ಜಿನ್ನಾ ಶೈಲಿ, ಎರಡನೆಯದು ಆಫ್ಘನ್ ಖಾರಾಕುಲಿ ಮತ್ತು ಮೂರನೆಯದು ರಷ್ಯಾದ ಖಾರಾಕುಲಿ.
ಈ ಅಂಗಡಿಯಲ್ಲಿ ತಯಾರಾದ ಕ್ಯಾಪ್ಗಳನ್ನು ಮುಹಮ್ಮದ್ ಅಲಿ ಜಿನ್ನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು ಧರಿಸಿದ್ದಾರಂತೆ. ಮುಜಾಫರ್ ಖಾನ್ ತಾತ 1944 ರಲ್ಲಿ ಜಿನ್ನಾಗೆ ಖಾರಾಕುಲಿ ಕ್ಯಾಪ್ ತಯಾರಿಸಿ ಕೊಟ್ಟಿದ್ದರು. ತಂದೆ 1984 ರಲ್ಲಿ ರಾಜೀವ್ ಗಾಂಧಿಗೆ ಖಾರಾಕುಲಿ ಕ್ಯಾಪ್ ತಯಾರಿಸಿ ಕೊಟ್ಟಿದ್ದರು. ಅಲ್ಲದೇ ಅನೇಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವ್ಯಕ್ತಿಗಳಿಗೆ ಖಾರಾಕುಲಿ ಕ್ಯಾಪ್ಗಳನ್ನು ತಯಾರಿಸಿ ವಿತರಿಸಿದ್ದರಂತೆ.
ಇನ್ನು, ಮುಜಾಫರ್ 2014 ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಾ.ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮಿರ್ವೈಜ್, ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕರಿಗೆ ಕ್ಯಾಪ್ ಮಾಡಿ ಕೊಟ್ಟಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಗೆ ವಿಶೇಷವಾಗಿ ಖರಾಕುಲಿ ಕ್ಯಾಪ್ ತಯಾರಿಸಿ ಕೊಟ್ಟಿದ್ದರು.
ಕಾಶ್ಮೀರದಲ್ಲಿ ಖರಾಕುಲಿಯನ್ನು ಶಾಹಿ ಟೋಪಿ ಎಂದೇ ಕರೆಯುವುದುಂಟು. ಇದನ್ನು ವಿಶೇಷ ರೀತಿಯ ಕುರಿ ಚರ್ಮದಿಂದ ತಯಾರಿಸಲಾಗುತ್ತದೆ. ಹಿಂದೆ ಕರಾಕುಲಿಯನ್ನು ಧರಿಸುವ ಸಂಪ್ರದಾಯವು ತುಂಬಾ ಹೆಚ್ಚು ಇತ್ತು. ಆದರೆ ಕಾಲಾನಂತರದಲ್ಲಿ ಆ ಸಂಪ್ರದಾಯವು ಕೊನೆಗೊಂಡಿತು.
ಇಂದಿನ ಜನರು ಖರಾಕುಲಿಯನ್ನು ಇಷ್ಟಪಡುವುದಿಲ್ಲ. ಹೀಗಾಗಿಯೇ ಹೊಸ ಮಾದರಿಯ ವಿನ್ಯಾಸಗಳನ್ನು ಇಟ್ಟುಕೊಂಡು ಕ್ಯಾಪ್ ತಯಾರಿಸಲಾಗುತ್ತಿದ್ದು, ಯುವಜನರು ಇದಕ್ಕೆ ಆಕರ್ಷಿತರಾಗುತ್ತಿದ್ದಾರೆ. ಅಲ್ಲದೇ ಚಳಿಗಾಲದ ದಿನಗಳಲ್ಲಿ ಅದನ್ನು ಧರಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಇದರ ಬೆಲೆ 5 ಸಾವಿರದಿಂದ ಪ್ರಾರಂಭಗೊಂಡು 20 ಸಾವಿರದವರೆಗೂ ಇದೆಯಂತೆ.
ಇದನ್ನೂ ಓದಿ:ಹರ್ದೋಯಿ ಗಂಡ ಹೆಂಡಿರ ಸಂಬಂಧಕ್ಕೆ ಹುಳಿ ಹಿಂಡಿದ ನೊಣಗಳು.. ಕನ್ಯೆ ಕೊಡೋರಿಲ್ಲ, ಮದುವೆ ಮುಂಜಿ ನಡೆಸೊಂಗಿಲ್ಲ!