ರಾಂಚಿ (ಜಾರ್ಖಂಡ್): ರಾಷ್ಟ್ರೀಯ ಶೂಟರ್ ತಾರಾ ಶಹದೇವ್ ಅವರಿಗೆ ಬಲವಂತದ ಮತಾಂತರಕ್ಕೆ ಒತ್ತಡ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನ ರಾಂಚಿಯ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ವಿಶೇಷ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿತು. ತಾರಾ ಅವರ ಪತಿ ರಕಿಬುಲ್ ಅಲಿಯಾಸ್ ರಂಜಿತ್ ಕೊಹ್ಲಿಗೆ ಜೀವಾವಧಿ ಶಿಕ್ಷೆ, ಆತನ ತಾಯಿ ಕೌಸರ್ ರಾಣಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಹಾಕಿದೆ. ಹೈಕೋರ್ಟ್‌ನ ಆಗಿನ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್‌ಗೂ 15 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ನಿಜ ಹೆಸರು ಮರೆಮಾಚಿ ಮೋಸದಿಂದ ಮದುವೆ: ರಾಷ್ಟ್ರೀಯ ಆಟಗಾರ್ತಿಯಾದ ತಾರಾ ಶಹದೇವ್ 2014ರಲ್ಲಿ ರಂಜಿತ್ ಕೊಹ್ಲಿಯನ್ನು ಮದುವೆಯಾಗಿದ್ದರು. ಆದರೆ, ನಂತರದಲ್ಲಿ ಗಂಡನ ಮನೆಯಲ್ಲಿ ವಿಪರೀತ ಹಿಂಸೆ ಅನುಭವಿಸುತ್ತಿದ್ದರು. ಪದೇ ಪದೇ ಹಲ್ಲೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು. ಪತಿಯ ನಿಜವಾದ ಹೆಸರು ರಂಜಿತ್ ಕೊಹ್ಲಿ ಅಲ್ಲ, ರಕಿಬುಲ್ ಎಂಬುವುದು ಗೊತ್ತಾಗಿ ಮೋಸದಿಂದ ವಿವಾಹವಾಗಿರುವುದು ಬಯಲಾಗಿತ್ತು. ಇದರ ನಡುವೆ ತಾರಾ ಶಹದೇವ್ ತನ್ನ ಪತಿ ಮತ್ತು ಅತ್ತೆ ಮತಾಂತರಕ್ಕೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದರು. ರಾಂಚಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಇದರ ಆಧಾರದ ಮೇಲೆ ರಾಂಚಿ ಪೊಲೀಸರು ದೆಹಲಿಯಲ್ಲಿ ರಂಜಿತ್‌ನನ್ನು ಬಂಧಿಸಿದ್ದರು. ತನಿಖೆಯ ವೇಳೆ ಹೈಕೋರ್ಟ್‌ನ ಅಂದಿನ ಸಬ್ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ಹೆಸರು ಹೊರಬಿದ್ದಿತ್ತು. ಇದರ ನಂತರ ತಾರಾ ಈ ಪ್ರಕರಣ ಸಂಬಂಧ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಅಂತೆಯೇ, ಹೈಕೋರ್ಟ್ ಇದಕ್ಕೆ ಸಮ್ಮತಿಸಿತ್ತು. ಇದರ ಫಲವಾಗಿ, 2015ರಲ್ಲಿ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು.
ಎರಡು ವರ್ಷದಲ್ಲಿ ಚಾರ್ಜ್ಶೀಟ್ ದಾಖಲು: ಸಿಬಿಐ ತನಿಖೆ ಆರಂಭಿಸಿ 2017ರ ಮೇ 12ರಂದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು. ಇದರಲ್ಲಿ ಪತಿ ರಕಿಬುಲ್, ಆತನ ತಾಯಿ ಕೌಸರ್ ರಾಣಿ ಹಾಗೂ ಮುಷ್ತಾಕ್ ಅಹ್ಮದ್ ಹೆಸರನ್ನು ತನಿಖಾ ದಳ ಹೆಸರಿಸಿತ್ತು. ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಸೆಪ್ಟೆಂಬರ್ 30ರಂದು ಮೂವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಐಪಿಸಿ ಸೆಕ್ಷನ್ 120ಬಿ, 376(2) (ಒಬ್ಬ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಮಾಡುವ ಸಂಚು), 298 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು) ಮತ್ತು 496 (ಬಲವಂತವಾಗಿ ಅಥವಾ ಮೋಸದ ಮೂಲಕ ಮದುವೆ) ಅಡಿ ತೀರ್ಪು ನೀಡಿ, ಶಿಕ್ಷೆ ಪ್ರಮಾಣ ಘೋಷಣೆಯನ್ನು ಇಂದಿಗೆ ನಿಗದಿಪಡಿಸಿತ್ತು.
ಕೋರ್ಟ್ಗೆ ಧನ್ಯವಾದ ಅರ್ಪಿಸಿದ ತಾರಾ: ಇಂದು ಮೂವರಿಗೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಿದ ನಂತರ ತಾರಾ ಶಹದೇವ್ ಮಾತನಾಡಿ, ನ್ಯಾಯಾಲಯ ಮತ್ತು ಸಿಬಿಐಗೆ ಧನ್ಯವಾದ ತಿಳಿಸಿದರು. ''ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆಯನ್ನು ಈ ತೀರ್ಪು ಮೂಡಿಸಿದೆ. ನಾನು ಪಟ್ಟ ನೋವು ಬೇರೆ ಯಾವುದೇ ಮಹಿಳೆ ಆಗಬಾರದು. ಇದೇ ಕಾರಣಕ್ಕೆ ನಾನು ನ್ಯಾಯಾಲಯದ ಮೊರೆ ಹೋಗಿದ್ದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಸಪ್ತಪದಿ ತುಳಿಯದ ಹಿಂದೂ ಮದುವೆ ಮಾನ್ಯವಲ್ಲ; ಅಲಹಾಬಾದ್ ಹೈಕೋರ್ಟ್