ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ): ಠಾಣಾಧಿಕಾರಿಯೊಬ್ಬರ ಪತ್ನಿ ಸ್ತನ್ಯಪಾನ ಮಾಡಿಸಿ ನವಜಾತ ಶಿಶುವಿನ ಜೀವ ಉಳಿಸಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಡಿಸೆಂಬರ್ 20 ರಂದು ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿ ಪೊದೆಯೊಳಗೆ ಅನಾಥ ಮಗು ಪತ್ತೆಯಾಗಿದ್ದು, ಹಸಿವು ಮತ್ತು ಚಳಿಯಿಂದಾಗಿ ಮಗುವಿನ ಸ್ಥಿತಿ ತುಂಬಾ ಗಂಭೀರವಾಗಿತ್ತು.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಮಗು ಹಸಿವು ಮತ್ತು ಚಳಿಯಿಂದ ಅಳುತ್ತಿತ್ತು. ಮಗುವಿಗೆ ಎದೆಹಾಲು ಬಿಟ್ಟು ಬೇರೇನನ್ನೂ ನೀಡಲು ಸಾಧ್ಯವಿರಲ್ಲಿ. ಈ ವಿಷಯ ತಿಳಿದ ಠಾಣಾಧಿಕಾರಿಯ ಪತ್ನಿ ಜ್ಯೋತಿ ಸಿಂಗ್ ಅವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಮಗುವಿಗೆ ಸ್ತನ್ಯಪಾನ ಮಾಡಿಸಿ ಮಾನವೀಯತೆ ಜೊತೆಗೆ ಮಾತೃ ಪ್ರೇಮ ಮೆರೆದಿದ್ದಾರೆ.
ಸದ್ಯ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಸ್ಥಿತಿ ಸುಧಾರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಜ್ಯೋತಿ ಸಿಂಗ್.. ಈ ರೀತಿ ಯಾರೂ ಕೂಡ ಮಕ್ಕಳನ್ನು ಅನಾಥರನ್ನಾಗಿ ಮಾಡಬೇಡಿ. ಆ ನವಜಾತ ಶಿಶುವನ್ನು ನೋಡಿದಾಗ ನನಗೆ ತುಂಬ ನೋವಾಯ್ತು, ಅದು ತುಂಬಾ ಅಳುತ್ತಿತ್ತು. ಆ ಹೆಣ್ಣು ಶಿಶು ಹಸಿವಿಂದ ಒದ್ದಾಡುತ್ತಿರುವುದನ್ನು ನನ್ನಿಂದ ನೋಡಲಾಗದೇ ತಕ್ಷಣ ಎದೆಹಾಲು ಕುಡಿಸಲು ನಿರ್ಧರಿಸಿದೆ. ಅದರಂತೆ ಆ ಕ್ಷಣದಲ್ಲಿ ಶಿಶುವಿನ ಹೊಟ್ಟೆ ತುಂಬಿಸಿದೆ. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದೆ. ಇಂತಹ ಶಿಶುಗಳು ಎಲ್ಲಿಯಾದರೂ ಪತ್ತೆಯಾದರೆ ಕೇವಲ ನಿಂತು ನೋಡದೇ, ಅನಾಥಾಶ್ರಮ ಸೇರಿದಂತೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ಮನವಿ ಮಾಡಿದ್ದಾರೆ.