ವಾರಣಾಸಿ : ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆ ಸೋಮವಾರ ಪೂರ್ಣಗೊಂಡಿದೆ. ಬಾವಿಯೊಳಗೆ 'ಶಿವಲಿಂಗ' ಪತ್ತೆಯಾಗಿದೆ. ಅದರ ರಕ್ಷಣೆ ಕೋರಿ ಸಿವಿಲ್ ನ್ಯಾಯಾಲಯದ ಮೊರೆ ಹೋಗುವುದಾಗಿ ಹಿಂದೂ ಪರ ವಕೀಲರು ಹೇಳಿದ್ದಾರೆ.
ಮಸೀದಿ ಒಳಗಿನ ಬಾವಿಯೊಳಗೆ ಶಿವಲಿಂಗವೊಂದ ಪತ್ತೆಯಾಗಿದೆ. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ. ಈ ಶಿವಲಿಂಗವು ನಂದಿಯನ್ನು ಎದುರಿಸುತ್ತಿರುವ ರೂಪದಲ್ಲಿದೆ ಎಂದು ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್ ಮತ್ತು ವಿಷ್ಣು ಜೈನ್ ಹೇಳಿದ್ದಾರೆ.
ಸೋಮವಾರ ಸಮೀಕ್ಷೆ ನಡೆಸಲು ನ್ಯಾಯಾಲಯ ನೇಮಿಸಿದ ಸಮಿತಿ ಸ್ಥಳಕ್ಕೆ ಆಗಮಿಸಿದ್ದರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಸುಮಾರು 65 ರಷ್ಟು ಕಾರ್ಯವು ಭಾನುವಾರವೇ ನಡೆದಿದೆ. ಇಂದು ಸಮೀಕ್ಷೆ ಪೂರ್ಣಗೊಂಡಿದ್ದು, ವಕೀಲರ ಆಯುಕ್ತರು ಮಂಗಳವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
ಓದಿ: ಜ್ಞಾನವಾಪಿ ಮಸೀದಿ: ಬಿಗಿ ಭದ್ರತೆಯಲ್ಲಿ 2ನೇ ದಿನದ ವಿಡಿಯೋಗ್ರಾಫಿ ಸಮೀಕ್ಷೆ
ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ಅವರ ಪ್ರಕಾರ, ದೇವಸ್ಥಾನದ ಭಾಗವಾಗಿದ್ದ ಮಸೀದಿಯ ಪ್ರದೇಶಗಳ ಸಮೀಕ್ಷೆಯನ್ನು ಭಾನುವಾರ ನಡೆಸಲಾಯಿತು. ಜ್ಞಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಹಿಂದೂ ದೇವಾಲಯದ ಅವಶೇಷಗಳು ಗೋಚರಿಸುತ್ತವೆ. ದೊಡ್ಡ ಪುರಾವೆಯಾಗಿರುವ ಚಿತ್ರಗಳನ್ನು ಸಮೀಕ್ಷೆ ಮಾಡಲಾಗುತ್ತದೆ. ಇಂದು ನಾಲ್ಕನೇ ಕೊಠಡಿ ಬೀಗ ತೆರೆದು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸದ್ಯ ಕಾನೂನು ಹೋರಾಟ ಎದುರಿಸುತ್ತಿದೆ. ವಾರಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ರಚನೆಯ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸಿದೆ.
ವಾರಣಾಸಿ ಕೋರ್ಟ್ ಆದೇಶ: ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಜ್ ಮಾಡಿ, ಆ ಸ್ಥಳಕ್ಕೆ ಯಾರೂ ಹೋಗದಂತೆ ಭದ್ರತೆ ಒದಗಿಸಬೇಕೆಂದು ಸಮೀಕ್ಷೆ ಮುಗಿದ ಬಳಿಕ ಜಿಲ್ಲಾಧಿಕಾರಿಗೆ ವಾರಣಾಸಿ ಕೋರ್ಟ್ ಆದೇಶಿಸಿದೆ. ವಾರಣಾಸಿ ಡಿಸಿ, ಪೊಲೀಸ್ ಆಯುಕ್ತ ಮತ್ತು ಸಿಆರ್ಪಿಎಫ್ ಕಮಾಂಡರ್ಗೆ ಭದ್ರತೆಯ ಹೊಣೆಯನ್ನು ಕೋರ್ಟ್ ಹೊರಿಸಿ ಆದೇಶಿಸಿದೆ.
ಹೊರ ಗೋಡೆಗಳ ಮೇಲಿನ ಹಿಂದೂ ದೇವತೆಗಳ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿ ದೆಹಲಿ ಮೂಲದ ಐವರು ಮಹಿಳೆಯರಾದ ರಾಖಿ ಸಿಂಗ್, ಲಕ್ಷ್ಮಿದೇವಿ, ಸೀತಾ ಸಾಹು ಮತ್ತು ಇತರರು ಏಪ್ರಿಲ್ 18, 2021ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.