ಲಡಾಖ್ ಪ್ರಾಂತ್ಯದ ಗಡಿಭಾಗದಲ್ಲಿ ಕುತಂತ್ರಿ ಡ್ರ್ಯಾಗನ್ ರಾಷ್ಟ್ರ ಚೀನಾ ಹಳ್ಳಿಗಳ ನಿರ್ಮಾಣ ಸೇರಿದಂತೆ ಸೇನಾ ಸನ್ನದ್ಧತೆ ಮಾಡುತ್ತಿರುವುದು ಭಾರತಕ್ಕೆ ಎಂದಿಗೂ ಅಪಾಯಕಾರಿ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಿದೆ.

ಚೀನಾದ ಸಾಮ್ರಾಜ್ಯಶಾಹಿ ಮನೋಭಾವವು ವಿಶ್ವಕ್ಕೆ ಆತಂಕಕಾರಿ ವಿಷಯವಾಗಿದೆ. ಚೀನಾದ ಯುದ್ಧದಾಹ, ಇಬ್ಬಗೆಯ ವಿದೇಶಾಂಗ ನೀತಿ, ಷಡ್ಯಂತ್ರಗಳಿಂದಾಗಿ ಆ ರಾಷ್ಟ್ರವನ್ನು ಎಲ್ಲ ದೇಶಗಳು ಅನುಮಾನದಿಂದಲೇ ನೋಡುವಂತಾಗಿದೆ. ಅಲ್ಲದೇ, ಕ್ಸಿ ಜಿನ್ಪಿಂಗ್ ಚೀನಾ ಅಧ್ಯಕ್ಷರಾದ ಬಳಿಕ ಯುದ್ಧತಂತ್ರಗಾರಿಕೆ ಮತ್ತು ಸಾಮ್ರಾಜ್ಯಶಾಹಿ ವಿಸ್ತರಣೆಯ ದಾಹ ದುಪ್ಪಟ್ಟಾಗಿದೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
ಇತ್ತೀಚೆಗೆ ಬೀಜಿಂಗ್ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇನೆಗೆ ಸುಮಾರು 3 ಲಕ್ಷ ಯುವ ಸೈನಿಕರನ್ನು ನೇಮಿಸಿಕೊಳ್ಳುವ ಯೋಜನೆ ಘೋಷಿಸಿದ್ದಾರೆ.
ಇದು ಭಾರೀ ಪ್ರಮಾಣದ ಸೇನಾ ನೇಮಕಾತಿಯಾಗಿದೆ. ಚೀನೀ ಮಿಲಿಟರಿಯ ಉತ್ತಮ ಗುಣಮಟ್ಟ, ಇತರ ದೇಶಗಳೊಂದಿಗೆ ಮಿಲಿಟರಿ ಸ್ಪರ್ಧೆಯನ್ನು ಗೆಲ್ಲುವುದು ಇದರ ಉದ್ದೇಶವಾಗಿದೆ. ಇದು ಭಾರತವಲ್ಲದೇ, ಇಡೀ ವಿಶ್ವವೇ ಗಮನಿಸಬೇಕಾದ ಅಂಶ ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರಾನ್' ಆಕ್ರಮಣಕಾರಿಯೇ?.. ವೈರಸ್ನಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ಕ್ಸಿ ಜಿನ್ಪಿಂಗ್ರ ಇತ್ತೀಚೆಗಿನ ಹೇಳಿಕೆಗಳು ಯುದ್ಧೋತ್ಸಾಹದಿಂದ ಕೂಡಿವೆ. ಅಚ್ಚರಿಯ ಸಂಗತಿಯೆಂದರೆ, ಜಗತ್ತಿನ ಯಾವುದೇ ರಾಷ್ಟ್ರದ ಅಧ್ಯಕ್ಷರು, ಪ್ರಧಾನಮಂತ್ರಿ, ವಿದೇಶಾಂಗ ಸಚಿವರಾಗಲಿ ಚೀನಾದ ಅಧ್ಯಕ್ಷರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲ.
ಸಿಕ್ಕಿಂ, ಲಡಾಖ್, ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ ಚೀನಾ ಪದೇ ಪದೇ ಅತಿಕ್ರಮಣ ನಡೆಸುತ್ತಿರುವ ಸಂಬಂಧ ಹಾಗೂ ಚೀನಾ ಅಧ್ಯಕ್ಷರ ಯುದ್ಧೋತ್ಸಾಹ ಹೇಳಿಕೆಗಳ ಬಗ್ಗೆ ಎಚ್ಚರ ಮತ್ತು ತನಿಖೆಯಾಗಬೇಕು. ಚೀನಾದ ಈ ನಡೆಗೆ ಹೇಗೆ ಕಡಿವಾಣ ಹಾಕಬೇಕು ಎಂಬುದನ್ನು ಕಂಡುಕೊಳ್ಳಬೇಕು ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಬರೆದಿದೆ.