ಮುಂಬೈ: ಭಾರತೀಯ ಜನತಾ ಪಕ್ಷವು ತನ್ನ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಹಿಂದುತ್ವವನ್ನು ಬಳಸುತ್ತಿದೆ. ಬಿಜೆಪಿಯೊಂದಿಗಿನ ಮೈತ್ರಿಯಿಂದ ಶಿವಸೇನೆ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ನಾನು ನಂಬುತ್ತೇನೆ ಎಂದು ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ಬಾಳಾಸಾಹೇಬ್ ಠಾಕ್ರೆ ಅವರ 96ನೇ ಜನ್ಮದಿನದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಸೇನೆ ತನ್ನ ಹೆಜ್ಜೆಗುರುತುಗಳನ್ನು ರಾಜ್ಯದ ಹೊರಗೆ ವಿಸ್ತರಿಸಲು ಪ್ರಯತ್ನಿಸುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಗುರುತಿಸಲು ಮುಂದಾಗಿದ್ದೇವೆ. ಅಕಾಲಿದಳ ಮತ್ತು ಶಿವಸೇನೆಯಂತಹ ಹಳೆಯ ಘಟಕಗಳು ಈಗಾಗಲೇ ಬಣದಿಂದ ಹೊರ ನಡೆದಿರುವುದರಿಂದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಕುಗ್ಗಿದೆ ಎಂದು ಹೇಳಿದರು.
ಓದಿ: ಹೊಸಗನ್ನಡದ ಕವಿ ಮುದ್ದಣ ಹೆಸರಲ್ಲಿ 150 ರೂ.ನಾಣ್ಯ ಅನಾವರಣ
ಶಿವಸೇನೆ ತನ್ನ ಹಿಂದುತ್ವದ ನಿಲುವನ್ನು ಬಿಟ್ಟಿಲ್ಲ ಎಂದು ಒತ್ತಿ ಹೇಳಿದ ಸಿಎಂ ಉದ್ಧವ್ ಠಾಕ್ರೆ, ಹಿಂದುತ್ವಕ್ಕೆ ಅಧಿಕಾರ ಬೇಕು ಎಂಬ ಕಾರಣಕ್ಕೆ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಆದರೆ, ನಮ್ಮ ಪಕ್ಷ ಎಂದಿಗೂ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿಲ್ಲ. ಶಿವಸೇನೆ ಬಿಜೆಪಿಯನ್ನು ಬಿಟ್ಟಿದೆಯೇ ಹೊರತು ಹಿಂದುತ್ವವನ್ನಲ್ಲ. ಬಿಜೆಪಿ ಅವಕಾಶವಾದಿ, ಬಿಜೆಪಿ ಅನುಸರಿಸುತ್ತಿರುವ ಹಿಂದುತ್ವ ಕೇವಲ ನೆಪ ಮಾತ್ರ, ಅಧಿಕಾರಕ್ಕಾಗಿ ಎಂದು ವಾಗ್ದಾಳಿ ನಡೆಸಿದರು.
2019 ರ ಮಹಾರಾಷ್ಟ್ರ ಚುನಾವಣೆಯ ನಂತರ ಶಿವಸೇನೆಯು ಬಿಜೆಪಿಯಿಂದ ದೂರ ಉಳಿದಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಲು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು. ಬಿಜೆಪಿ ತನ್ನ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಮಿತ್ರಪಕ್ಷಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಎಂದರೆ ಹಿಂದುತ್ವವಲ್ಲ, ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂಬ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.
ಮಹಾರಾಷ್ಟ್ರದಲ್ಲಿ ನಮ್ಮಪಕ್ಷ ಅಧಿಕಾರದಲ್ಲಿರುವುದರಿಂದ ಶಿವಸೇನೆ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿ ತಳಮಟ್ಟದಿಂದ ಪಕ್ಷ ಕಟ್ಟಬೇಕು ಎಂದು ಮನವಿ ಮಾಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ