ಶಿರಡಿ (ಮಹಾರಾಷ್ಟ್ರ): ಶಿರಡಿ ಸಾಯಿ ದೇವಾಲಯದ ಟ್ರಸ್ಟ್ ಅಧಿಕಾರಿಗಳು ಭಕ್ತರ ದೇಣಿಗೆ ಹಣವನ್ನು ಬಳಸಿಕೊಂಡು ವಿಮಾನದಲ್ಲಿ ಪ್ರಯಾಣ ಮಾಡಿರುವ ವಿಚಾರ ಆರ್‌ಟಿಐ ಮಾಹಿತಿಯಿಂದ ಬಯಲಾಗಿದೆ.
ಶಿರಡಿಯಲ್ಲಿರುವ ಸಾಯಿಬಾಬಾ ದೇವಾಲಯದ ನಿರ್ವಹಣೆಯನ್ನು ರಾಜ್ಯ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆ ನೋಡಿಕೊಳ್ಳುತ್ತಿದೆ. ಈ ನಡುವೆ ದೇವಸ್ಥಾನದ ಟ್ರಸ್ಟ್ ಅಧಿಕಾರಿಗಳು ಭಕ್ತರ ದೇಣಿಗೆ ಹಣ ಬಳಿಸಿಕೊಂಡು 2018 ರಿಂದ 2021ರ ನಡುವೆ ತಿರುಪತಿ, ರಾಂಚಿ, ಡೆಹ್ರಾಡೂನ್, ದೆಹಲಿ, ಮುಂಬೈ ಸೇರಿದಂತೆ ಔರಂಗಬಾದ್ಗೆ ವಿಮಾನ ಪ್ರಯಾಣ ಬೆಳೆಸಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ಸಂಬಂಧ ಮಾಹಿತಿ ಹಕ್ಕು ಕಾರ್ಯಕರ್ತ ಸಂಜಯ್ ಕೇಲ್ ಎಂಬುವವರು ವಿಮಾನದಲ್ಲಿ ಪ್ರಯಾಣಿಸಿದ ಅಧಿಕಾರಿಗಳು ಮತ್ತು ನೌಕರರ ಹೆಸರುಗಳ ಬಗ್ಗೆ ಸರ್ಕಾರದ ಬಳಿ ಮಾಹಿತಿ ಕೇಳಿದ್ದರು. ಈ ವೇಳೆ, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಮಾತ್ರ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿತ್ತು.
ಓದಿ: ಕಾರು - ಆಟೋ ಮಧ್ಯ ಭೀಕರ ರಸ್ತೆ ಅಪಘಾತ: ಮಹಿಳೆಯರ ದೇಹಗಳು ಛಿದ್ರ, ಮೂವರ ಸಾವು
ಸರ್ಕಾರದ ನಿಯಮದ ಪ್ರಕಾರ ದೇವಾಲಯದ ಟ್ರಸ್ಟ್ನ ಅಧಿಕಾರಿಗಳಿಗೆ ಭಕ್ತರ ದೇಣಿಗೆ ಹಣ ಬಳಸಿಕೊಳ್ಳಲು ಯಾವುದೇ ಹಕ್ಕಿಲ್ಲ. ಆದರೆ, ಅಧಿಕಾರಿಗಳು ಭಕ್ತರು ನೀಡಿದ ದೇಣಿಗೆಯಿಂದ ಲಕ್ಷಗಟ್ಟಲೇ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಸರ್ಕಾರವು ಎಲ್ಲ ಹಣವನ್ನು ವಸೂಲಿ ಮಾಡಬೇಕು. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಲ್ ಒತ್ತಾಯಿಸಿದ್ದಾರೆ.