ಭೋಪಾಲ್ (ಮಧ್ಯಪ್ರದೇಶ): ದೇಶದ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಅವರ ಅಂತ್ಯಕ್ರಿಯೆಯು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸ್ವಗ್ರಾಮ ಆಂಖ್ಮೌನಲ್ಲಿ ಶನಿವಾರ ನೆರವೇರಿತು. ದೆಹಲಿಯ ಗುರುಗ್ರಾಮ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದ ಶರದ್ ಯಾದವ್ ಅವರ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ ತರಲಾಯಿತು. ನಂತರ ಅವರ ಸ್ವಂತ ತೋಟದಲ್ಲಿ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನಡೆಯಿತು.
ಗಣ್ಯರಿಂದ ಅಂತಿಮ ನಮನ: ಶರದ್ ಯಾದವ್ ಅವರ ಪಾರ್ಥಿವ ಶರೀರವು ದೆಹಲಿಯಿಂದ ವಿಮಾನದ ಮೂಲಕ ಭೋಪಾಲ್ನ ರಾಜಭೋಜ್ ವಿಮಾನ ನಿಲ್ದಾಣಕ್ಕೆ ತರಲಾಯಿತು. ನಂತರ ಮಧ್ಯಾಹ್ನ 3.15ರ ಸುಮಾರಿಗೆ ಸ್ವಗ್ರಾಮಕ್ಕೆ ಆಗಮಿಸಿತು. ಅಲ್ಲಿಂದ ಗ್ರಾಮದಲ್ಲಿರುವ ಪೂರ್ವಿಕರ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ಕೆಲಕಾಲ ಇರಿಸಲಾಯಿತು. ಇಲ್ಲಿ ಕುಟುಂಬಸ್ಥರು ಮತ್ತು ಸಂಬಂಧಿಕರು ಅಂತಿಮ ದರ್ಶನ ಪಡೆದರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಕಾಂಗ್ರೆಸ್ ಮುಖಂಡ ಸುರೇಶ್ ಅಪಚೌರಿ, ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಸಚಿವ ಮುಖೇಶ್ ಸಾಹ್ನಿ ಸೇರಿದಂತೆ ಹಲವು ಪ್ರಮುಖರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಸಂಜೆ 4.45ರ ಸುಮಾರಿಗೆ ಶರದ್ ಯಾದವ್ ಚಿತೆಗೆ ಪುತ್ರ ಶಂತನು ಹಾಗೂ ಪುತ್ರಿ ಸುಭಂಗಿಣಿ ಅಗ್ನಿಸ್ಪರ್ಶ ಮಾಡಿದರು.
ಶಿವರಾಜ್ - ದಿಗ್ವಿಜಯ್ ಫೋಟೋ ವೈರಲ್: ಇದೇ ವೇಳೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ. ಶರದ್ ಯಾದವ್ ಅವರ ಪಾರ್ಥಿವ ಶರೀರ ಬರುವಿಕೆಗಾಗಿ ಭೋಪಾಲ್ನ ರಾಜಭೋಜ್ ವಿಮಾನ ನಿಲ್ದಾಣದಲ್ಲಿ ಈ ಇಬ್ಬರೂ ನಾಯಕರು ಒಟ್ಟಿಗೆ ಕುಳಿತು ಕಾಯುತ್ತಿರುವ ಫೋಟೋ ಇದಾಗಿದೆ.
ಶರದ್ ಯಾದವ್ ಹಿನ್ನೆಲೆ: ಶರದ್ ಯಾದವ್ ಮಧ್ಯಪ್ರದೇಶದಲ್ಲಿ ಹುಟ್ಟಿ ಅಲ್ಲಿಂದ ರಾಜಕೀಯ ಜೀವನ ಆರಂಭಿಸಿದರೂ ಬಿಹಾರ ಅವರ ಕರ್ಮಭೂಮಿಯಾಗಿತ್ತು. ಮಧ್ಯಪ್ರದೇಶದ ಹೋಶಂಗಾಬಾದ್ (ಈಗಿನ ನರ್ಮದಾಪುರಂ) ಜಿಲ್ಲೆಯ ಆಂಖ್ಮೌ ಗ್ರಾಮದಲ್ಲಿ ರೈತ ಕುಟುಂಬದಲ್ಲಿ 1947ರ ಜುಲೈ 1ರಂದು ಜನಿಸಿದ್ದರು. 1971ರಲ್ಲಿ ಜಬಲ್‌ಪುರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅಲ್ಲಿಂದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಲೋಹಿಯಾ ಚಳುವಳಿಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದರು. ಅಲ್ಲದೇ, ಚಳವಳಿಯ ಸಂದರ್ಭದಲ್ಲಿ ಶರದ್ ಯಾದವ್ ಸೆರೆವಾಸ ಸಹ ಅನುಭವಿಸಿದ್ದರು.
ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ರಾಜ್ಯಸಭೆಗೆ ಮೂರು ಬಾರಿ ಜೆಡಿಯುನಿಂದ ಆಯ್ಕೆಯಾಗಿದ್ದರು. 1974ರಲ್ಲಿ ಮೊದಲ ಬಾರಿಗೆ ಅವರು ಜಬಲ್ಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. ಇದಾದ ನಂತರ 1977ರಲ್ಲೂ ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದಲ್ಲದೇ ಉತ್ತರ ಪ್ರದೇಶ ಮತ್ತು ನಂತರ ಬಿಹಾರ ರಾಜಕೀಯದಲ್ಲಿ ಅವರು ಸಕ್ರಿಯರಾಗಿದ್ದರು.
2003ರಲ್ಲಿ ಜೆಡಿಯು ಸ್ಥಾಪನೆಯಾದಾಗ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರನ್ನು ಪಕ್ಷದ ನಾಯಕತ್ವದ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಅನಂತರ 2018ರಲ್ಲಿ ನೂತನ ಪಕ್ಷ ಲೋಕತಾಂತ್ರಿಕ್ ಜನತಾ ದಳ (ಎಲ್‌ಜೆಡಿ) ಸ್ಥಾಪಿಸಿದ್ದರು. 2020ರ ಮಾರ್ಚ್‌ನಲ್ಲಿ ಎಲ್‌ಜೆಡಿ ಪಕ್ಷವನ್ನು ಲಾಲೂ ಯಾದವ್ ಅವರ ಆರ್‌ಜೆಡಿ ಪಕ್ಷದೊಂದಿಗೆ ವಿಲೀನಗೊಳಿಸಿದ್ದರು.
ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ, 7 ಸಲ MP, ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ (75) ಇನ್ನಿಲ್ಲ