ಪಾಲ್ಘರ್(ಮಹಾರಾಷ್ಟ್ರ): ಭಾರತೀಯರ ಶತಮಾನಗಳ ಕನಸಾದ ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯರು ಆಶೀರ್ವದಿಸಬೇಕೇ ಹೊರತು, ಟೀಕಿಸಬಾರದು. ಮಂದಿರವನ್ನು ರಾಜಕೀಯದ ಹಿನ್ನೆಲೆಯಲ್ಲಿ ಲೋಕಾರ್ಪಣೆ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ನಿರ್ಮಾಣ ಸಂಪೂರ್ಣವಾಗಿಲ್ಲ. ಶಂಕರಾಚಾರ್ಯ ಪೀಠದ ಇಬ್ಬರು ಶ್ರೀಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಮಮಂದಿರ ನಿರ್ಮಾಣ ಪೂರ್ಣ ಹಂತದಲ್ಲಿದೆ. ಹಿಂದು ಧರ್ಮದ ಅಸ್ಮಿತೆಯಾಗಿ ಮಂದಿರವನ್ನು ನೋಡಲಾಗುತ್ತದೆ. ದಿವ್ಯದೇಗುಲದ ಉದ್ಘಾಟನೆಗೆ ವಿಶ್ವವೇ ಕಾತುರದಿಂದ ಕಾದಿದೆ. ಇಂತಹ ದಿವ್ಯ ಕಾರ್ಯಕ್ರಮವನ್ನು ಶಂಕರಾಚಾರ್ಯ ಪೀಠದ ಇಬ್ಬರು ಶ್ರೀಗಳು ಟೀಕಿಸಿದ್ದು ಸರಿಯಲ್ಲ ಎಂದರು.
ಮಂದಿರಕ್ಕಾಗಿ ಮೋದಿ ಮುತುವರ್ಜಿ: ರಾಮಮಂದಿರ ನಿರ್ಮಾಣಕ್ಕೆ ಯಾರೂ ಮಾಡದ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇಂತಹ ಮಹತ್ಕಾರ್ಯವನ್ನು ಬಿಜೆಪಿ ಆಡಳಿತದಲ್ಲಿ ಪೂರೈಸಲಾಗಿದೆ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ದೇವಸ್ಥಾನದ ಉದ್ಘಾಟನೆಗೆ ಬೆಂಬಲ ನೀಡಬೇಕೆ ಹೊರತು ಟೀಕೆ ಮಾಡುವುದಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ಶಂಕರಾಚಾರ್ಯರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ರಾಜಕೀಯ ಕೋನದಲ್ಲಿ ಅಳೆಯುತ್ತಿದ್ದಾರೆ. ಈ ದೇವಾಲಯ ರಾಜಕೀಯಕ್ಕಾಗಿ ನಿರ್ಮಿಸಲಾಗಿಲ್ಲ. ಧರ್ಮ ಉಳಿವಿಗೆ ಕಟ್ಟಲಾಗಿದೆ. ರಾಮ ನಮ್ಮ ದೇವರು. ಟೀಕಿಸುತ್ತಿರುವ ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ನೀಡಿದ ಅವರ ವೈಯಕ್ತಿಕ ಕೊಡುಗೆ ಏನು ಎಂದು ರಾಣೆ ಪ್ರಶ್ನಿಸಿದರು.
ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಮಮಂದಿರವನ್ನು ಉದ್ಘಾಟಿಸಬೇಕು ಎಂಬ ಶಿವಸೇನೆ (ಠಾಕ್ರೆ ಬಣ) ಆಗ್ರಹದ ಬಗ್ಗೆ ಉತ್ತರಿಸಿದ ಅವರು, ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಂಡು ಟೀಕಿಸುವ ವ್ಯಕ್ತಿಗಳ ಪ್ರಶ್ನೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಶಂಕರಾಚಾರ್ಯರ ಆಕ್ಷೇಪವೇನು?: ನಾಲ್ವರು ಶಂಕರಾಚಾರ್ಯರ ಪೈಕಿ ಇಬ್ಬರು ಶ್ರೀಗಳು ಭವ್ಯ ರಾಮಮಂದಿರದ ಕೆಲಸಗಳು ಪೂರ್ತಿಯಾಗಿಲ್ಲ. ಅದಕ್ಕೂ ಮೊದಲೇ ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನಿಬ್ಬರು ಶ್ರೀಗಳು ದೇಗುಲ ಉದ್ಘಾಟನೆಗೆ ಕಾರಣಾಂತಗಳಿಂದ ಬರಲು ಆಗುತ್ತಿಲ್ಲ. ಶಕ್ತಿಪೀಠದಲ್ಲಿ ಪೂಜೆ, ಹವನ ನಡೆಸಲಾಗುವುದು ಎಂದು ತಿಳಿಸಿದ್ದಾಗಿ ವಿಶ್ವ ಹಿಂದು ಪರಿಷತ್ (ವಿಹೆಚ್ಪಿ) ತಿಳಿಸಿದೆ.
ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕರ್ನಾಟಕದ ಶೃಂಗೇರಿ ಶಾರದಾ ಪೀಠ, ಗುಜರಾತ್‌ನ ದ್ವಾರಕಾ ಶಾರದಾ ಪೀಠ, ಉತ್ತರಾಖಂಡದ ಜ್ಯೋತಿರ್ಪೀಠ ಮತ್ತು ಒಡಿಶಾದ ಗೋವರ್ಧನ ಪೀಠದ ಶಂಕರಾಚಾರ್ಯರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೇ ವಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡಿವೆ. ಜೊತೆಗೆ ಕಾಂಗ್ರೆಸ್ ಕೂಡ ಅಂದಿನ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಮೆಕ್ಕೆಜೋಳದಲ್ಲಿ ಮೂಡಿಬಂದ ರಾಮಮಂದಿರ-ವಿಡಿಯೋ