ಉತ್ತರ ಪ್ರದೇಶ: ಇರಾನ್‌ನಲ್ಲಿ ಸಮಸ್ಯೆಗೆ ಸಿಲುಕಿದ್ದ ಯುವಕನನ್ನು ವಿದೇಶಾಂಗ ಸಚಿವಾಲಯದ ಸಹಾಯದಿಂದ ಭಾರತಕ್ಕೆ ಮರಳಿ ಕರೆ ತರಲಾಗಿದೆ.
ರಿಂಕು ಭಾರತಕ್ಕೆ ಮರಳಿದ ವ್ಯಕ್ತಿ. ಇರಾನ್‌ನ ವ್ಯಾಪಾರಿಯೊಬ್ಬರು ನೌಕಾಪಡೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ ಹಿನ್ನೆಲೆ ರಿಂಕು ಇರಾನ್ಗೆ ತೆರಳಿದ್ದ. ನಂತರ ಕೆಲಸದ ನೆಪ ಹೇಳಿ ರಿಂಕುವಿನಿಂದ 3 ಲಕ್ಷದ 50 ಸಾವಿರ ರೂಪಾಯಿಗಳನ್ನು ವ್ಯಾಪಾರಿ ಪಡೆದುಕೊಂಡು, ಕೆಲಸ ನೀಡದೆ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಹಡಗಿನಲ್ಲಿ ಒತ್ತೆಯಾಳಾಗಿ ಇಟ್ಟಿದ್ದ ಎನ್ನಲಾಗಿದೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದ ರಿಂಕು, ದೂರವಾಣಿ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ.
ನಂತರ ರಿಂಕು ಕುಟುಂಬಸ್ಥರು ಷಹಜಹಾನ್ಪುರ ಸಂಸದ ಅರುಣ್ ಸಾಗರ್ ಅವರಿಗೆ ಮಾಹಿತಿ ನೀಡಿದ್ದರು. ನಂತರ ಸಂಸದರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಸಂಪರ್ಕಿಸಿ, ವಿದೇಶಾಂಗ ಸಚಿವಾಲಯದ ನೆರವಿನಿಂದ ರಿಂಕುಗೆ ವಾಪಸ್ ಭಾರತಕ್ಕೆ ಬರಲು ಟಿಕೆಟ್ ವ್ಯವಸ್ಥೆ ಮಾಡಿದ್ದರು. ಇಂದು ಯುವಕ ಮರಳಿ ತವರಿಗೆ ಬಂದಿದ್ದು, ಸಿಹಿ ತಿನಿಸಿ ಕುಟುಂಬಸ್ಥರು ಸಂತಸದಿಂದ ಬರಮಾಡಿಕೊಂಡರು.
ಇನ್ನು ಇರಾನ್ನಿಂದ ಸುರಕ್ಷಿತವಾಗಿ ಭಾರತಕ್ಕೆ ಬರಲು ಸಹಾಯ ಮಾಡಿದ ಸಂಸದ ಅರುಣ್ ಸಾಗರ್ ಮತ್ತು ಸಚಿವಾಲಯಕ್ಕೆ ರಿಂಕು ಮತ್ತು ಅವರ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.